ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಹೊಸದಿಲ್ಲಿ, ಎ.21: ಬಂಗಾಳ ಕೊಲ್ಲಿಯಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಯಶಸ್ವಿಯಾಗಿ ನಡೆಸುವ ಮೂಲಕ ಭಾರತ ಸಮುದ್ರದಿಂದ ನೆಲದ ಮೇಲಿನ ಗುರಿಗೆ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯವಿರುವ ರಾಷ್ಟ್ರಗಳ ಪ್ರತಿಷ್ಠಿತ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ.
ಸಮುದ್ರದ ನೆಲೆಯಿಂದ ಭೂಮಿಯ ಬಹುದೂರದವರೆಗಿನ ಗುರಿಯನ್ನು ನಿರ್ದಿಷ್ಟವಾಗಿ ಗುರುತಿಸಿ ಅದನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.
ಪರೀಕ್ಷಾ ಪ್ರಯೋಗ ಉದ್ದೇಶಿತ ಫಲಿತಾಂಶ ನೀಡಿದೆ. ಇದರಿಂದ ಭಾರತೀಯ ನೌಕಾಪಡೆಯ ಶಕ್ತಿ ವರ್ಧಿಸಿದೆ ಮತ್ತು ದೇಶವು ಆಯ್ದ ಕೆಲ ದೇಶಗಳಿರುವ ಪ್ರತಿಷ್ಠಿತ ಗುಂಪಿನಲ್ಲಿ ಸ್ಥಾನ ಪಡೆದಿದೆ ಎಂದು ನೌಕಾಪಡೆಯ ವಕ್ತಾರ ಕ್ಯಾ. ಡಿ.ಕೆ.ಶರ್ಮ ತಿಳಿಸಿದ್ದಾರೆ. ಅಮೆರಿಕ, ರಷ್ಯ, ಬ್ರಿಟನ್ ಮತ್ತು ಚೀನಾ ದೇಶಗಳ ನೌಕಾಪಡೆ ಈ ಸಾಮರ್ಥ್ಯ ಹೊಂದಿದೆ. ಭಾರತದ ನೌಕಾಪಡೆಯ ಬಹುತೇಕ ಸಮರನೌಕೆಗಳು ಈ ಕ್ಷಿಪಣಿಯನ್ನು ಉಡಾಯಿಸುವ ಸಾಮರ್ಥ್ಯ ಹೊಂದಿವೆ. ಭಾರತ- ರಷ್ಯಾ ಜಂಟಿ ಸಹಯೋಗದಲ್ಲಿ ಈ ಕ್ಷಿಪಣಿಯನ್ನು ತಯಾರಿಸಲಾಗಿದ್ದು ಕ್ಷಿಪಣಿಯ ನೌಕೆ ನಿರೋಧಕ ಶ್ರೇಣಿಯನ್ನು ಈಗಾಗಲೇ ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ.