ರಾಜಕೀಯ ಇಚ್ಛಾಶಕ್ತಿ ಸುಧಾರಣೆಗೆ ಪೂರಕ: ಪ್ರಧಾನಿ ಮೋದಿ
ಹೊಸದಿಲ್ಲಿ, ಎ.21: ಸುಧಾರಣೆ ಕೈಗೊಳ್ಳಲು ಅಗತ್ಯವಿರುವ ರಾಜಕೀಯ ಇಚ್ಛಾಶಕ್ತಿ ಯ ಕೊರತೆ ತನ್ನಲ್ಲಿ ಇಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಸಾಧನೆ ಮತ್ತು ಪರಿವರ್ತನೆಗಾಗಿ ಸರಕಾರಿ ನೌಕರರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಲೋಕಸೇವಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು. ಚೌಕಟ್ಟಿನಿಂದ ಹೊರಬಂದು ಯೋಚಿಸುವ ಸಮಯ ಬಂದಿದೆ. ನಿಯಂತ್ರಕರಾಗುವ ಬದಲು ಸಮರ್ಥರಾಗುವ ಅಗತ್ಯವಿದೆ. ತಮ್ಮ ಅನುಭವ ಹೊರೆಯಾಗುತ್ತಿದೆ ಎಂದಾದರೆ ಹಿರಿಯ ಅಧಿಕಾರಿಗಳು ಆತ್ಮಶೋಧನೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ರಾಜಕೀಯ ಇಚ್ಛಾಶಕ್ತಿಯಿಂದ ಸುಧಾರಣೆ ಸಾಧ್ಯ. ಆದರೆ ನೌಕರ ವರ್ಗದವರ ಕಾರ್ಯ ನಿರ್ವಹಣೆ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಪರಿವರ್ತನೆ ಸಾಧ್ಯ . ಇದನ್ನು ಒಂದೇ ಕ್ರಮದಲ್ಲಿ ತರಬೇಕಾಗಿದೆ . ರಾಜಕೀಯ ಇಚ್ಛಾಶಕ್ತಿ ಸುಧಾರಣೆಗೆ ಪೂರಕ ಎಂದು ಪ್ರಧಾನಿ ನುಡಿದರು.
ಅಧಿಕಾರಶಾಹಿ ವರ್ಗದಲ್ಲಿ ಶ್ರೇಣಿ ವ್ಯವಸ್ಥೆ ಒಂದು ಸಮಸ್ಯೆಯ ವಿಷಯವಾಗಿದ್ದು ಇದು ವಸಾಹತು ಆಡಳಿತದ ಕೊಡುಗೆಯಾಗಿದೆ. ಇದನ್ನು ಮಸೂರಿ(ಇಲ್ಲಿ ಲೋಕಸೇವಾ ಅಕಾಡೆಮಿ ಇದೆ)ಯಲ್ಲೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಸರಕಾರಿ ನೌಕರರು ಜನತೆಯನ್ನು ತಲುಪುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ, ಇ-ಆಡಳಿತ, ಮೊಬೈಲ್ ಆಡಳಿತ ಮುಂತಾದ ವ್ಯವಸ್ಥೆಗಳನ್ನು ಹೆಚ್ಚಾಗಿ ಬಳಸಬೇಕು ಎಂದವರು ಹೇಳಿದರು.