ನಿಷೇಧಿತ ತಂಬಾಕು ಉತ್ಪನ್ನ ಮಾರಾಟದ ಅಂಗಡಿಗಳಿಗೆ ದಾಳಿ
ಹೆಬ್ರಿ, ಮಲ್ಪೆಯಲ್ಲಿ 32 ಪ್ರಕರಣ ದಾಖಲು: ದಂಡ ವಸೂಲಿ

ಉಡುಪಿ, ಎ.21: ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಆದೇಶದಂತೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಆಹಾರ ಭದ್ರತೆ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಅಧಿಕಾರಿಗಳ ತಂಡ ಹೆಬ್ರಿ ಹಾಗೂ ಮಲ್ಪೆಯಲ್ಲಿ ನಿಷೇಧಿತ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ ಕೋಟ್ಪಾ ಕಾಯಿದೆಯಡಿ ಒಟ್ಟು 32 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದೆ.
ಆಹಾರ ಸುರಕ್ಷತೆ ಅಡಿಯಲ್ಲಿ 20 ಅಂಗಡಿಗಳ ಮೇಲೆ ದಾಳಿ ನಡೆಸಿ ಹೆಬ್ರಿ ಯಲ್ಲಿ 7 ಪ್ರಕರಣಗಳನ್ನು ದಾಖಲಿಸಿ 1400ರೂ. ದಂಡ ಹಾಗೂ ಮಲ್ಪೆಯಲ್ಲಿ 25 ಪ್ರಕರಣಗಳನ್ನು ದಾಖಲಿಸಿ 4750 ರೂ ದಂಡ ವಸೂಲಿ ಮಾಡಿ, ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ನೋಟೀಸು ನೀಡ ಲಾಯಿತು. ಕೋಟ್ಪಾ ಸೆಕ್ಷನ್ 5ರ ಪ್ರಕಾರ ತಂಬಾಕು ಉತ್ಪನ್ನಗಳ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು.
ದಾಳಿಯು ಉಡುಪಿ ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಠಾನ ಜಿಲ್ಲೆ ಎಂದು ಮೇ 31(ವಿಶ್ವ ತಂಬಾಕು ವಿರೋಧಿ ದಿನ)ರೊಳಗಾಗಿ ಘೋಷಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ನಿರಂತರ ದಾಳಿ ಕೈಗೊಳ್ಳುವ ಯೋಜನೆ ಇದೆ. ವ್ಯಾಪಾರಸ್ಥರು ಕೋಟ್ಪಾ 2003ರ ಕಾಯ್ದೆಯ ಸೆಕ್ಷನ್ 4 ಮತ್ತು ಸೆಕ್ಷನ್ 6ಎ ನಾಮಪಲಕಗಳನ್ನು ಕಡ್ಡಾಯವಾಗಿ ಅಂಗಡಿಗಳಲ್ಲಿ ಪ್ರದರ್ಶಿಸಬೇಕು. ಸೆಕ್ಷನ್ 6ಬಿಯಂತೆ ಶಿಕ್ಷಣ ಸಂಸ್ಥೆಯ 100 ಗಜದ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಸ್ಥಗಿತಗೊಳಿಸಬೇಕೆಂದು ಸೂಚಿಸಲಾಗಿದೆ.
ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ವಾಸುದೇವ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಂತೇಶ್ ಉಳ್ಳಾಗಡ್ಡಿ, ಕಾರ್ಮಿಕ ಇಲಾಖೆಯ ಜೀವನ್ ಮತ್ತು ವಿಶ್ವನಾಥ್, ಆಹಾರ ಸುರಕ್ಷತೆ ಅಧಿಕಾರಿಗಳಾದ ವೆಂಕಟೇಶ್, ಆರೋಗ್ಯ ಮೇಲ್ವಿಚಾರಕ ಆನಂದ್ ಗೌಡ, ಉಡುಪಿ ನಗರಸಭೆ ಆರೋಗ್ಯ ನಿರೀಕ್ಷಕ ಆನಂದ್, ಮಲ್ಪೆ ಪೋಲೀಸ್ ಠಾಣೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.







