ಇಬ್ಬರು ಐಸಿಸ್ ಉಗ್ರರಿಗೆ ಏಳು ವರ್ಷ ಜೈಲು ಶಿಕ್ಷೆ

ಹೊಸದಿಲ್ಲಿ,ಎ.21: ಭಯೋತ್ಪಾದಕ ಸಂಘಟನೆ ಐಸಿಸ್‌ಗಾಗಿ ಹಣವನ್ನು ಸಂಗ್ರಹಿಸಲು ಮತ್ತು ಜನರನ್ನು ಭರ್ತಿ ಮಾಡಲು ಸಂಚು ನಡೆಸಿದ್ದಾಗಿ ತಪ್ಪೊಪ್ಪಿಕೊಂಡ ಇಬ್ಬರಿಗೆ ಇಲ್ಲಿಯ ಜಿಲ್ಲಾ ನ್ಯಾಯಾಲಯವು ಶುಕ್ರವಾರ ತಲಾ ಏಳು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಇದು ಭಾರತದಲ್ಲಿ ಐಸಿಸ್ ಬೆಂಬಲಿಗರನ್ನು ಶಿಕ್ಷೆಗೊಳಪಡಿಸಿರುವ ಮೊದಲ ಪ್ರಕರಣವಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಈ ಪ್ರಕರಣದ ತನಿಖೆಯನ್ನು ನಡೆಸಿತ್ತು.
ಜಮ್ಮು-ಕಾಶ್ಮೀರ ನಿವಾಸಿ ಶೇಖ್ ಅಝರ್-ಉಲ್-ಇಸ್ಲಾಂ (24) ಮತ್ತು ಮಹಾರಾಷ್ಟ್ರದ ಮುಹಮ್ಮದ್ ಫರ್ಹಾನ್ (25) ಅವರು ಶಿಕ್ಷೆಗೊಳಗಾಗಿರುವ ದೋಷಿಗಳಾಗಿದ್ದಾರೆ.
ಅವರಿಬ್ಬರೂ ‘‘ನಮ್ಮ ಕೃತ್ಯಗಳಿಗಾಗಿ ನಮಗೆ ಪಶ್ಚಾತ್ತಾಪವಾಗಿದೆ ಮತ್ತು ಹೊಸ ಬದುಕು ನಡೆಸಲು ಬಯಸಿದ್ದೇವೆ ’’ಎಂದು ಕೋರಿ ಅರ್ಜಿಯೊಂದನ್ನು ತಮ್ಮ ವಕೀಲರ ಮೂಲಕ ಕಳೆದ ತಿಂಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಇಬ್ಬರನ್ನು ಕಳೆದ ವರ್ಷದ ಜನವರಿಯಲ್ಲಿ ಅಬುಧಾಬಿಯಿಂದ ಗಡೀಪಾರು ಗೊಳಿಸಿದ ಬಳಿಕ ಬಂಧಿಸಲಾಗಿತ್ತು. ಇತರರನ್ನು ಐಸಿಸ್‌ಗೆ ಸೇರಿಸಲು ಅವರು ಹಲವಾರು ಬಾರಿ ದುಬೈಗೆ ಪ್ರಯಾಣಿಸಿದ್ದರೆಂದು ಎನ್‌ಐಎ ಆರೋಪಿಸಿತ್ತು. ಲ್ಯಾಪ್‌ಟಾಪ್, ಮೊಬೈಲ್ ಫೋನ್ ಸೇರಿದಂತೆ 25 ವಿದ್ಯುನ್ಮಾನ ಸಾಧನಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿತ್ತು.
ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವದ ಇತರೆಡೆಗಳಲ್ಲಿನ ‘ಸಮಾನ ಮನಸ್ಕ ’ರನ್ನು ಸಂಪರ್ಕಿಸುತ್ತಿದ್ದ ಅವರು ಐಸಿಸ್‌ಗಾಗಿ ಹಣವನ್ನೂ ಸಂಗ್ರಹಿಸಿದ್ದರು.







