ಬಾಬ್ರಿ ಮಸೀದಿ ಧ್ವಂಸಕ್ಕೆ ಪ್ರಚೋದಿಸಿದ್ದು ಅಡ್ವಾಣಿಯಲ್ಲ, ನಾನು: ಬಿಜೆಪಿಯ ಮಾಜಿ ಶಾಸಕ ವೇದಾಂತಿ ಹೇಳಿಕೆ

ಲಕ್ನೊ, ಎ.21: ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸುವಂತೆ ಕರಸೇವಕರಿಗೆ ಪ್ರಚೋದನೆ ನೀಡಿದ್ದು ಅಡ್ವಾಣಿಯಲ್ಲ. ಅವರು ಈ ಪ್ರಕರಣದಲ್ಲಿ ಯಾವುದೇ ಪಾತ್ರ ವಹಿಸಿಲ್ಲ. ನಾನು ಕರಸೇವಕರನ್ನು ಪ್ರಚೋದಿಸಿ, ಮಸೀದಿ ಧ್ವಂಸಗೊಂಡಿರುವುದನ್ನು ಖಾತರಿ ಪಡಿಸಿಕೊಂಡಿದ್ದೆ ಎಂದು ಬಿಜೆಪಿಯ ಮಾಜಿ ಶಾಸಕ ರಾಮ್‌ವಿಲಾಸ್ ವೇದಾಂತಿ ಹೇಳಿದ್ದಾರೆ.
1992ರ ಡಿಸೆಂಬರ್ 6ರಂದು ಸಾವಿರಾರು ಮಂದಿ ಕರಸೇವಕರು (ಸ್ವಯಂಸೇವಕರು) ಮಸೀದಿಯ ಬಳಿ ಸೇರಿದ್ದರು. ಆಗ ತಾನು, ದಿವಂಗತ ಅಶೋಕ್ ಸಿಂಘಾಲ್ ಮತ್ತು ಗೋರಖ್‌ನಾಥ್ ದೇವಳದ ಮಹಾಂತ್ ಅವೈದ್ಯನಾಥ್ ಸೇರಿಕೊಂಡು ಮಸೀದಿ ಧ್ವಂಸಗೊಳಿಸುವಂತೆ ವಿಶ್ವಹಿಂದೂ ಪರಿಷದ್ ಕಾರ್ಯಕರ್ತರನ್ನು ಪ್ರಚೋದಿಸಿದೆವು ಎಂದು 1998ರಲ್ಲಿ ಉ.ಪ್ರದೇಶದ ವಿಧಾನಸಭೆಗೆ ಆಯ್ಕೆಯಾಗಿದ್ದ ರಾಮ್‌ವಿಲಾಸ್ ವೇದಾಂತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಏಕ್ ಧಕ್ಕಾ ಔರ್ ದೋ.. ಬಾಬ್ರಿ ಮಸೀದಿ ಥೋಡ್ ದೋ..’ (ಇನ್ನೊಂದು ಹೊಡೆತ ನೀಡು.. ಮಸೀದಿ ಒಡೆದುಬಿಡು) ಎಂದು ನಾನು ಕರಸೇವಕರನ್ನು ಪ್ರಚೋದಿಸುತ್ತಿದ್ದೆ.ಆದರೆ ಮುರಳಿಮನೋಹರ್ ಜೋಷಿ, ಅಡ್ವಾಣಿ ಮತ್ತು ವಿಜಯರಾಜೆ ಸಿಂಧಿಯಾ ಕರಸೇವಕರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದು ವೇದಾಂತಿ ೇಳಿದ್ದಾರೆ.
ಮಸೀದಿ ದ್ವಂಸಕ್ಕೆ ಒಳಸಂಚು ನಡೆಸಿದ 13 ಮಂದಿ ಆರೋಪಿಗಳಲ್ಲಿ ವೇದಾಂತಿ ಕೂಡಾ ಒಬ್ಬರು. ಬಾಬರಿ ಮಸೀದಿ ಧ್ವಂಸ ಘಟನೆ ಭಾರತದ ಸಂವಿಧಾನದ ಜಾತ್ಯಾತೀತ ಚೌಕಟ್ಟನ್ನು ನಡುಗಿಸಿದ ವಿದ್ಯಮಾನ ಎಂದು ಸುಪ್ರೀಂಕೋರ್ಟ್ ಹೇಳಿತ್ತು.





