ಶಿಬಿರಗಳಿಂದ ವ್ಯಕ್ತಿತ್ವ ವಿಕಸನ : ಕುದ್ರೋಳಿ ಗಣೇಶ್

ಬೆಳ್ತಂಗಡಿ,ಎ.21: ಶಿಬಿರಗಳಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಯೋಗ್ಯ ತರಬೇತಿಯ ಮೂಲಕ ಇನ್ನಷ್ಟು ಮಾಹಿತಿಗಳನ್ನು ಪಡೆಯಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಜಾದೂಗಾರ ಮೆಗಾಮ್ಯಾಜಿಕ್ ಸ್ಟಾರ್ ಖ್ಯಾತಿಯ ಕುದ್ರೋಳಿ ಗಣೇಶ್ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಕಲ್ಲಗುಡ್ಡೆಯಲ್ಲಿ ಕಾಂಜವೇ (ಕಾಂತಾರದ ಚಿನ್ನರ ಜನಪದ ರಂಗ ವೇದಿಕೆ) ಉದ್ಘಾಟಿಸಿ ಮಾತನಾಡಿದರು.
ನಮ್ಮ ಅಭಿನಯ ಸಾಮರ್ಥ್ಯವನ್ನು ಹೆಚ್ಚಿಸಿ ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸುವ ಶಕ್ತಿ ರಂಗಕಲೆಗಿದೆ. ವೇದಿಕೆ ಏರುವ ಕುರಿತು ಇರುವ ಅಂಜಿಕೆ ಕೂಡಾ ಇದರಿಂದ ದೂರವಾಗುತ್ತದೆ ಎಂದರು.
ಶಿಕ್ಷಣದಲ್ಲಿ ರಂಗಭೂಮಿ ಕುರಿತು ಹತ್ತು ದಿನಗಳ ಬೇಸಗೆ ಶಿಬಿರವನ್ನು ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಉದ್ಘಾಟಿಸಿ, ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸಬೇಕು. ಸಾಹಿತ್ಯ, ರಂಗಕಲೆ ಮಕ್ಕಳನ್ನು ತಲುಪುವಂತಾಗಬೇಕು. ಜನಪದ, ಯಕ್ಷಗಾನ, ನಾಟಕದ ಮೂಲಕ ನಮ ಸಾಹಿತ್ಯ ಜನರನ್ನು ತಲುಪುತ್ತವೆ. ಇದರ ಜತೆಗೆಮಾಹಿತಿ, ಸಂಸ್ಕಾರ ಕೂಡಾ ದೊರೆಯುತ್ತದೆ ಎಂದರು.
ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯ ಡಾ.ಕೆ. ಎಸ್. ಮೋಹನ ನಾರಾಯಣ್, ರಂಗಕಲೆ ಒಂದು ಪರಿಣಾಮಕಾರಿ ಮಾಧ್ಯಮವಾಗಿದೆ. ಮಕ್ಕಳನ್ನು ಯಂತ್ರಗಳಾಗಿಸಬೇಡಿ ಎಂದರು.
ಪುಂಜಾಲಕಟ್ಟೆ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಚೇತನ್ ಸೋಮೇಶ್ವರ, ಪುಂಜಾಲಕಟ್ಟೆ ಸರಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಸುಕುಮಾರ್ ಜೈನ್, ಇತಿಹಾಸ ಉಪನ್ಯಾಸಕ ಆನಂದ ಗೌಡ, ಉದ್ಯಮಿ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಶಿಬಿರದ ನಿರ್ದೇಶಕ, ಆಯೋಜಕ, ರಂಗನಿರ್ದೇಶಕ, ಪುಂಜಾಲಕಟ್ಟೆ ಕಾಲೇಜಿನ ಉಪನ್ಯಾಸಕ ಶೀನಾ ನಾಡೋಳಿ ಸ್ವಾಗತಿಸಿದರು. ವಾಣಿ ಕಾಲೇಜಿನ ಉಪನ್ಯಾಸಕಿ ಅನುರಾಧಾ ಕೆ. ರಾವ್ ನಿರ್ವಹಿಸಿದರು. ಪಾ್ರರ್ಥನಾ ಎಸ್. ನಾಡೋಳಿ ವಂದಿಸಿದರು.
ಶಿಬಿರದಲ್ಲಿ ಶಿಕ್ಷಣದಲ್ಲಿ ರಂಗಭೂಮಿ ಚಟುವಟಿಕೆಗಳು, ನಾಟಕಾಭ್ಯಾಸ ಹಾಗೂ ಪ್ರದರ್ಶನ, ರಂಗಾಭಿನಯ, ರಂಗಾಟಗಳು, ವಿವಿಧ ಆಟಗಳು, ಮುಖವರ್ಣಿಕೆ, ಮುಖವಾಡಗಳ ತಯಾರಿಕೆ, ಗಿಡ ಮರ ಬಳ್ಳಿಗಳ ಪರಿಚಯ, ಸ್ಪೋಕನ್ ಇಂಗ್ಲಿಷ್, ಸಾಮೂಹಿಕ ಹಾಗೂ ವೈಯಕ್ತಿಕ ಹಾಡುಗಳ ಕಲಿಕೆ ಮೊದಲಾದ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡಲಿದ್ದಾರೆ.







