‘ಶ್ರೇಣೀಕೃತ ವ್ಯವಸ್ಥೆ ಅಲ್ಲ; ಸಮಾಂತರ ಸಮಾಜ ಬೇಕು’ : ಶ್ರೀಬಾರ್ಕೂರು ಮಹಾಸಂಸ್ಥಾನ ಉದ್ಘಾಟಿಸಿ ಸಿಎಂ ಸಿದ್ಧರಾಮಯ್ಯ
'ನಾನು ನಾಸ್ತಿಕನಲ್ಲ, ಢೋಂಗಿತನವಿಲ್ಲ'

ಉಡುಪಿ, ಎ.21: ನಮ್ಮಲ್ಲಿ ಸ್ವಾರ್ಥಕ್ಕಾಗಿ ಮಾಡಿಕೊಂಡಿರುವ ಶ್ರೇಣೀಕೃತ ಸಮಾಜ ವ್ಯವಸ್ಥೆ ಇದೆ. ಇದು ಹೋಗಿ ಸಮಾಂತರದ ಸಮಾಜ ವ್ಯವಸ್ಥೆ ಬೇಕು. ಇದನ್ನೇ ಬಸವಣ್ಣ ಎಂಟು ಶತಮಾನಗಳ ಹಿಂದೆ ಅನುಭವ ಮಂಟಪದ ಮೂಲಕ ಪ್ರತಿಪಾದಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಬಾರಕೂರಿನ ಭಾರ್ಗವ ಬೀಡಿನಲ್ಲಿ ಶ್ರೀ ಡಾ.ವಿಶ್ವಸಂತೋಷ ಭಾರತಿ ಶ್ರೀಪಾದರ ನೇತೃತ್ವದ ಶ್ರೀಬಾರ್ಕೂರು ಮಹಾಸಂಸ್ಥಾನಂ ಟ್ರಸ್ಟ್ ಮೂಲಕ ಸ್ಥಾಪನೆಗೊಂಡಿರುವ ಅಳಿಯಕಟ್ಟು ಪರಂಪರೆಯ ದೈವದೇಗುಲಗಳ ಮೂಲ ನೆಲೆಬೀಡು ಶ್ರೀಬಾರ್ಕೂರು ಮಹಾಸಂಸ್ಥಾನವನ್ನು ಶುಕ್ರವಾರ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡುತಿದ್ದರು.
ಜಗತ್ತಿನಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿರುವವರೆಗೆ ಶೋಷಣೆ ಎಂಬುದು ಜೀವಂತವಾಗಿರುತ್ತದೆ ಎಂದ ಸಿದ್ಧರಾಮಯ್ಯ, ಸಾಮಾಜಿಕವಾಗಿ ಶೋಷಿತರಾ ದವರನ್ನು ಮೇಲಕ್ಕೆತ್ತಲು ಸಮಾಜ ಸುಧಾರಕರು ಉದಯಿಸಿದರು. ನಾರಾಯಣ ಗುರು, ಬಸವಣ್ಣರಂತಹವರು ಇಂಥ ಜಾತಿ ವ್ಯವಸ್ಥೆ ವಿರುದ್ದ ಹೋರಾಡಿದರು ಎಂದರು.
ಇತಿಹಾಸ ಗೊತ್ತಿಲ್ಲದವರಿಂದ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ನುಡಿದ ಸಿದ್ಧರಾಮಯ್ಯ, ಹಿಂದೆ ಸಮಾಜದ ಕೆಳವರ್ಗದ ಜನಕ್ಕೆ ದೇವಸ್ಥಾನಗಳಿಗೆ ಪ್ರವೇಶವಿರಲಿಲ್ಲ. ಮನುಷ್ಯರೆಲ್ಲಾ ಒಂದೇ, ಆದರೆ ನಮ್ಮ ಸ್ವಾರ್ಥಕ್ಕಾಗಿ ನಾವು ಜಾತಿಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಇದರಿಂದ ನಾವು ಹುಟ್ಟುವಾಗಲೇ ಜಾತಿ ಹಣೆಪಟ್ಟಿ ಇರುತ್ತದೆ. ಪ್ರತಿ ಮನುಷ್ಯನಲ್ಲೂ ಮಾನವೀಯತೆ ನೆಲೆಸಿದಾಗ, ಈ ಅಮಾನವೀಯ ಪದ್ಧತಿ ತೊಲಗಲು ಸಾಧ್ಯ ಎಂದರು.
ಜಾತಿಯ ಹೆಸರಿನಲ್ಲಿ ದೇಗುಲಗಳ ಪ್ರವೇಶಕ್ಕೆ ಅವಕಾಶವಿಲ್ಲದಿದ್ದರೆ ಅಂತಹ ದೇಗುಲಗಳಿಗೆ ಹೋಗದಂತೆ ನಾರಾಯಣ ಗುರು ಕರೆ ನೀಡಿದ್ದರು. ಇದಕ್ಕಾಗಿ ಅವರು ಪ್ರತ್ಯೇಕ ಗುಡಿಗಳನ್ನೇ ನಿರ್ಮಿಸಿದ್ದರು ಎಂದು ಮುಖ್ಯಮಂತ್ರಿ ಹೇಳಿದರು.
ಧರ್ಮವು ಎಲ್ಲರೂ ಚೆನ್ನಾಗಿರುವುದನ್ನು ಬಯಸುತ್ತದೆ. ಇದನ್ನೇ ಶರಣರು ಜನರಿಗೆ ಸುಲಭದಲ್ಲಿ ಅರ್ಥವಾಗುವಂತೆ ‘ದಯೆಯಿಲ್ಲದ ಧರ್ಮ ಯಾವುದಯ್ಯಾ’ ಎಂದಿದ್ದರು. ಇದನ್ನು ಅರಿಯಲು ಸಂಸ್ಕೃತದ ದೊಡ್ಡ ದೊಡ್ಡ ಶ್ಲೋಕ ಓದಿರಬೇಕಿಲ್ಲ. ‘ಯಾರಿಗೂ ಕೆಡುಕ ಬಯಸದಿರುವುದೇ ಧರ್ಮ’ ಎಂದು ನಮ್ಮ ಶರಣರು, ದಾಸರು, ಸೂಫಿಗಳು ಹಾಗೂ ಸಂತರು ಜನರ ಭಾಷೆಯಲ್ಲಿ ಕೆಳವರ್ಗದ ಜನರನ್ನೂ ತಲುಪುವಂತೆ ಹೇಳಿದರು ಎಂದು ವಿವರಿಸಿದರು.
ಧರ್ಮ, ಜಾತಿ ಹೆಸರಿನಲ್ಲಿ ಜನರನ್ನು ಒಡೆಯುವುದು ಅನಾಗರಿಕವಾಗಿದೆ. ನಾವೂ ಚೆನ್ನಾಗಿದ್ದು, ನೆರೆಹೊರೆಯವರನ್ನೂ ಚೆನ್ನಾಗಿರುವಂತೆ ನೋಡಿ ಕೊಳ್ಳುವುದು ಧರ್ಮದ ನೈಜ ತಿರುಳು. ಇನ್ನೊಬ್ಬರಿಗೆ ಒಳಿತನ್ನು ಬಯಸದೇ ಕೇಡನ್ನು ಬಯಸುವುದು ಅಧರ್ಮವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಅವರು ಬಾರ್ಕೂರು ಮಹಾಸಂಸ್ಥಾನದ ಮೂಲಕ ರಾಜ್ಯ ಭೂತಾಳ ಪಾಂಡ್ಯನ ಹೆಸರಿನಲ್ಲಿ ನೀಡಲಾದ ತುಳುನಾಡಿನ ಚೊಚ್ಚಲ ಪ್ರಶಸ್ತಿಯನ್ನು ಮಾಜಿ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ, ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಮುಂಬಯಿ ಉದ್ಯಮಿ ಶಶಿಕಿರಣ ಶೆಟ್ಟಿ ಹಾಗೂ ಮಂಗಳೂರು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಚಿನ್ನಪ್ಪ ಗೌಡ ಅವರಿಗೆ ಪ್ರದಾನ ಮಾಡಿದರು.
ಸಮಾರಂದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಮುಜರಾಯಿ ಮತ್ತು ಜವಳಿ ಸಚಿವ ರುದ್ರಪ್ಪ ಮಾಲಪ್ಪ ಲಮಾಣಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನಪರಿಷತ್ ಮಾಜಿ ಸದಸ್ಯ ಶ್ರೀನಿವಾಸ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಮೈಸೂರು ಶ್ರೀಕ್ಷೇತ್ರ ಸುತ್ತೂರು ಮಠದ ಶ್ರೀಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಶಬರಿಮಲೆ ಪಂದಲ ರಾಜ ವಂಶಸ್ಥ ರಾಜ ಕೇರಳವರ್ಮ, ಬಂಟ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಡಾ.ವಿಶ್ವಸಂತೋಷ ಭಾರತಿ ಶ್ರೀಪಾದರು, ಭಗವಂತನಲ್ಲಿ ಜಾತಿ ಎಂಬುದಿಲ್ಲ, ನಾವು ಜಾತಿಗಳನ್ನು ಮಾಡಿ ದ್ದೇವೆ. ಆದರೆ ಇಲ್ಲಿ ದೈವಗಳ ಆರಾಧನೆ ಮಾಡಲು ಎಲ್ಲಾ ವರ್ಗಗಳ ಜನರಿಗೂ ಅವಕಾಶವಿದೆ. ಎಲ್ಲಾ ಜಾತಿ-ವರ್ಗಗಳ ಜನರು ಬಂದು ತಮ್ಮ ಕುಲದೈವಗಳನ್ನು ಮುಕ್ತವಾಗಿ ಪೂಜೆ ಮಾಡಬಹುದು. ಇದನ್ನು ಸಮಾಜಕ್ಕೆ ಅರ್ಪಿಸಿದ್ದೇನೆ ಎಂದರು.
ಟ್ರಸ್ಟ್‌ನ ಪದಾಧಿಕಾರಿಗಳಾದ ಬಿ.ಅಪ್ಪಣ್ಣ ಹೆಗ್ಡೆ, ಗುರ್ಮೆ ಸುರೇಶ್ ಶೆಟ್ಟಿ, ಬಿ.ಶಾಂತಾರಾಮ ಶೆಟ್ಟಿ, ಕರುಣಾಕರ ಎಂ.ಶೆಟ್ಟಿ, ಬಾರಕೂರು ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ವಕ್ವಾಡಿ ಪ್ರವೀಣ್‌ಕುಮಾರ್ ಶೆಟ್ಟಿ ಸ್ವಾಗತಿಸಿದರೆ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ವಂದಿಸಿದರು.
ನಾನು ನಾಸ್ತಿಕನಲ್ಲ, ಢೋಂಗಿತನವಿಲ್ಲ
ಸಿದ್ಧರಾಮಯ್ಯ ನಾಸ್ತಿಕನಲ್ಲ. ಆದರೆ ಅನೇಕ ಆಸ್ತಿಕರಂತೆ ಢೋಂಗಿತನ ನನ್ನಲ್ಲಿಲ್ಲ. ದೇವನೊಬ್ಬ ನಾಮ ಹಲವು. ಯಾವ ದೇವರ ಪೂಜೆ ಮಾಡಿದರೇನು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ನನಗೆ ನಮ್ಮೂರಿನ ದೇವರೇ ಸಾಕು ಎಂದರು. ನಾನು ನನ್ನೂರಿನ ಸಿದ್ಧರಾಮೇಶ್ವರ, ಮೈಸೂರಿನ ಚಾಮುಂಡೇಶ್ವರಿ, ಮಹಾದೇಶ್ವರ ಹಾಗೂ ತಿರುಪತಿ ದೇವಸ್ಥಾನಗಳಿಗೆ ಹೋಗಿದ್ದೇನೆ.
ಆತ್ಮಶುದ್ಧಿ, ಮಾನವೀಯತೆ ಇಲ್ಲದಿದ್ದರೆ ಯಾವ ದೇವರು ಒಲಿಯಲು ಸಾಧ್ಯವಿಲ್ಲ. ಇದಕ್ಕೆ ಮಂತ್ರ, ಸಂಸ್ಕೃತ ಕಲಿಯಬೇಕಾಗಿಲ್ಲ. ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಿದರೆ ಸಾಕಾಗುತ್ತದೆ ಎಂದು ಸಿದ್ಧರಾಮಯ್ಯ ಭಾಷಣದ ನಡುವೆ ನುಡಿದರು.







