ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೌಶಲ 2017 ಉದ್ಘಾಟನೆ

ಮೂಡುಬಿದಿರೆ,ಎ.21: ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೌಶಲ್ಯಾಭಿವೃದ್ಧಿಗಾಗಿ ಎರಡು ದಿವಸ ನಡೆಸುವ ಕೌಶಲ-2017 ರಾಷ್ಟೀಯ ವಿಚಾರಸಂಕಿರಣಕೆ್ಕ ಶುಕ್ರವಾರ ಚಾಲನೆ ನೀಡಲಾಯಿತು.
ರಾಜ್ಯ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ವಿಚಾರ ಸಂಕಿರಣ ಉದ್ಘಾಟಿಸಿ, ವಿದ್ಯಾರ್ಥಿದೆಸೆಯಲ್ಲೇ ಕೌಶಲ್ಯಗಳ ಕುರಿತು ಸರಿಯಾದ ತರಬೇತಿ ಮತ್ತು ಮಾರ್ಗದರ್ಶನ ದೊರೆಯಬೇಕು. ಅವಕಾಶಗಳ ಬಗ್ಗೆ ಅರಿವು ಮತ್ತು ಅವುಗಳ ಸದುಪಯೋಗ ಮಾಡುವ ಜ್ಞಾನ ಇರಬೇಕಾದದ್ದು ಅವಶ್ಯಕ. ಸರ್ಕಾರದ ವಿವಿಧ ಯೋಜನೆಗಳ ಸಂಪೂರ್ಣ ಉಪಯೋಗವನ್ನು ಯುವಜನತೆ ಪಡೆದು ಉದ್ಯೋಗದಲ್ಲಿ, ಉದ್ಯಮದಲ್ಲಿ ಯಶಸ್ಸು ಪಡೆಯಬೇಕು ಎಂದು ಕರೆಯಿತ್ತರು.
ವಿಟಿಯು ಕೌಶಲ್ಯಾಭಿವೃದ್ಧಿಕೇಂದ್ರದ ನಿರ್ದೇಶಕ ಪ್ರೊ. ಅಮಲನ್ ಮಾತನಾಡಿ, ತಾಂತ್ರಿಕ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿಯ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ವಹಿಸಿದ್ದರು . ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಕಾರ್ಯಕ್ರಮ ಸಂಯೋಜಕ ಪ್ರೊ.ಪಿ. ರಾಮಕೃಷ್ಣ ಚಡಗ ಉಪಸ್ಥಿತರಿದ್ದರು. ಗುರುದತ್ ಸೋಮಯಾಜಿ ನಿರೂಪಿಸಿದರು. ಡಾ. ಗುರು ಆರಾಧ್ಯ ವಂದಿಸಿದರು .
ಎರಡು ದಿನಗಳ ಈ ಸೆಮಿನಾರ್ ನಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಣ ತಜ್ಞರು ಭಾಗವಹಿಸುತ್ತಿದ್ದು ಪ್ರಬಂಧ ಮಂಡನೆಗಳು, ವಿಚಾರಗೋಷ್ಠಿ ಮತ್ತು ಚರ್ಚೆ ನಡೆಯಲಿದೆ.







