ಅಪೆಂಡಿಸೈಟಿಸ್ ಎಂಬ ದಿಢೀರ್ ರೋಗ
ನಿನ್ನೆ ಮೊನ್ನೆವರೆಗೆ ಖುಷಿಯಿಂದ ಓಡಾಡಿಕೊಂಡಿದ್ದ ವ್ಯಕ್ತಿ ಧಿಡೀರ್ ಆಗಿ ಹೊಟ್ಟೆ ನೋವು ಎಂದು ಆಸ್ಪತ್ರೆ ಸೇರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು, ಹುಷಾರಾಗಿ ಮನೆಗೆ ಸೇರಿದ ಕಥೆಗಳನ್ನು ನಾವು ಹಲವರಿಂದ ಹಲವಾರು ಬಾರಿ ಕೇಳಿ ತಿಳಿದಿದ್ದೇವೆ. ಎಲ್ಲರ ಬಾಯಲ್ಲಿಯೂ ಒಂದೇ ಶಬ್ದ ಆತನಿಗೆ ಅಪೆಂಡಿಕ್ಸ್ ಅಪರೇಷನ್ ಆಯ್ತಂತೆ ಎಂದು. ಎಲ್ಲವೂ ಸರಿಯಾಗಿಯೇ ಇದ್ದು ಒಂದು ಮುಂಜಾನೆ ವಿಪರೀತ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದೌಡಾಯಿಸಿದಾಗ ಕಿಬ್ಬೊಟ್ಟೆಯ ಬಳಿಯಲ್ಲಿನ ನೋವನ್ನು ವೈದ್ಯರು ಪರೀಕ್ಷಿಸಿ, ನಿಮಗೆ ಅಪೆಂಡಿಸೈಟಿಸ್ ಆಗಿದೆ, ತಕ್ಷಣ ಅಪರೇಷನ್ ಮಾಡಲೇಬೇಕು ಎಂದಾಗ ಹೆಚ್ಚಿನವರಿಗೆ ಆಕಾಶವೇ ಕಳಚಿ ಬಿದ್ದಂತೆ ಅನಿಸುವುದು ಸಹಜ. ಹೆಚ್ಚಿನ ಸಮಯದಲ್ಲಿ ಈ ಅಪೆಂಡಿಸೈಟಿಸ್ ಕಾಯಿಲೆಯನ್ನು ಶಸ್ತ್ರ ಚಿಕಿತ್ಸೆಯ ಮುಖಾಂತರವೇ ಚಿಕಿತ್ಸೆ ನೀಡಿ ಗುಣ ಪಡಿಸಬೇಕಾಗುತ್ತದೆ. ಒಂದು ಬಾರಿ ಅಪೆಂಡಿಸೈಟಿಸ್ ಎಂದು ನಿರ್ಧಾರವಾಗಿ, ಅದು ರೋಗ ನಿರೋಧಕ ಔಷಧಿಗಳಿಂದ ಕಡಿಮೆಯಾದರೂ, ಮತ್ತೆ ಕೆಲವೇ ದಿನಗಳಲ್ಲಿ ಮಗದೊಮ್ಮೆ ಊದಿಕೊಂಡು, ಮತ್ತಷ್ಟು ವ್ಯಗ್ರವಾಗಿ ಕಾಣಿಸಿಕೊಳ್ಳುವುದು ಅಪೆಂಡಿಸೈಟಿಸ್ ರೋಗದ ಹೆಗ್ಗಳಿಕೆ. ಈ ಕಾರಣದಿಂದಲೇ ಇದಕ್ಕೆ ಶಸ್ತ್ರ ಚಿಕಿತ್ಸೆಯೇ ಅತ್ಯುತ್ತಮ ಚಿಕಿತ್ಸೆ.
ಏನಿದು ಅಪೆಂಡಿಕ್ಸ್?
ಅಪೆಂಡಿಕ್ಸ್ ಎನ್ನುವುದು ನಮ್ಮ ದೇಹದ ಕರುಳಿನ ಒಂದು ಭಾಗ. ಸಣ್ಣ ಮತ್ತು ದೊಡ್ಡ ಕರುಳು ಸೇರುವ ಜಾಗದಲ್ಲಿ ಇರುವ ಒಂದು ಚಿಕ್ಕ ಚೀಲದಂತಹ ಒಂದು ರಚನೆ. ಸಾಮಾನ್ಯ 6ರಿಂದ 8 ಸೆ.ಮೀ.ಉದ್ದವಿರುತ್ತದೆ. ಮೂರ್ತಿ ಚಿಕ್ಕದಾದರೂ, ಈ ಅಪೆಂಡಿಕ್ಸ್‌ನ ಕೀರ್ತಿ ಮಾತ್ರ ಬಹಳ ದೊಡ್ಡದು. ಈ ಅಪೆಂಡಿಕ್ಸ್‌ನ ಒಳಗಡೆ ಸೇರಿಕೊಳ್ಳುವ ಅಥವಾ ಉತ್ಪತ್ತಿಯಾಗುವ ಜಿಡ್ಡು ಪದಾರ್ಥಗಳು ಆಗಿಂದಾಗ್ಗೆ ಹೊರ ಬಂದು ಕರುಳಿನಲ್ಲಿ ಬೆರೆತು ಹೋಗುತ್ತದೆ. ಯಾವುದಾದರೂ ಕಾರಣದಿಂದ ಈ ಪ್ರಕ್ರಿಯೆಗೆ ಅಡ್ಡಿಯಾದಲ್ಲಿ ’ಅಂಪೆಂಡಿಕ್ಸ್’ ಊದಿಕೊಂಡು, ಅಪೆಂಡಿಸೈಟಿಸ್‌ಗೆ ಕಾರಣವಾಗುತ್ತದೆ. ಅಪೆಂಡಿಕ್ಸ್ ಊದಿಕೊಳ್ಳಲು ಯಾವುದೇ ನಿರ್ದಿಷ್ಟ ಕಾರಣಗಳು ಇಲ್ಲ. ಆದರೆ ಗಟ್ಟಿಯಾದ ಮಲ ಪದಾರ್ಥಗಳು, ಸೋಂಕು ತಗುಲಿದಾಗ, ವೈರಲ್ ಸೋಂಕು ಉಂಟಾದಾಗ, ಪರಾವಲಂಬಿ ಜೀವಿಗಳಿಂದ ತುಂಬಿದಾಗ, ಗೆಡ್ಡೆ ಬೆಳೆದಾಗ, ದುಗ್ಧ ಗ್ರಂಥಿಗಳ ಕಾರ್ಯಕ್ಕೆ ಅಡ್ಡಿಯಾದಾಗ ಅಥವಾ ಕಲ್ಲು ಬೆಳೆದಾಗ, ಈ ಅಪೆಂಡಿಕ್ಸ್ ಭಾಗ ಮುಚ್ಚಿಕೊಂಡು ಮತ್ತಷ್ಟು ಊತಕ್ಕೆ ಕಾರಣವಾಗುತ್ತದೆ. ಕೇವಲ 5ಮಿ.ಮೀ.ಗಿಂತ ಕಡಮೆಯಾಗಿರುವ ಈ ಅಪೆಂಡಿಕ್ಸ್‌ನ ಚೀಲದ ಗೋಡೆ, ಊದಿಕೊಂಡಾಗ 8 ರಿಂದ 10 ಮಿ.ಮೀ.ಗಳಷ್ಟು ಊದಿಕೊಂಡು ಸಾಕಷ್ಟು ರಾದ್ದಾಂತಗಳಿಗೆ ಕಾರಣವಾಗಿ ಅಪೆಂಡಿಸೈಟಿಸ್ ಎಂಬುದಾಗಿ ಕರೆಯಲ್ಪಡುತ್ತದೆ. ವಿಪರೀತ ಹೊಟ್ಟೆ ನೋವು (ಬಲಭಾಗದ ಕಿಬ್ಬೊಟ್ಟೆಯ ಬಳಿ) ಈ ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ.
ಲಕ್ಷಣಗಳು:
ಅಪೆಂಡಿಸೈಟಿಸ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು, ಆದರೆ 10 ರಿಂದ 30ರ ವಯಸ್ಸಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 2 ವರ್ಷಗಳಿಗಿಂತ ಚಿಕ್ಕ ವಯಸ್ಸಿನಲ್ಲಿ ಬಹಳ ವಿರಳ. ಅಮೆರಿಕ ದೇಶದಲ್ಲಿ ಪ್ರತಿ 15ರಲ್ಲಿ ಒಬ್ಬ ಈ ರೋಗದಿಂದ ಬಳಲುತ್ತಾನೆ. ಅಪೆಂಡಿಸೈಟಿಸ್ ರೋಗವನ್ನು ತಡೆಗಟ್ಟುವುದು ಕಷ್ಟಕರ. ಆದರೆ ಹೆಚ್ಚು ನಾರುಯುಕ್ತ ಆಹಾರಗಳಾದ ಹಸಿ ತರಕಾರಿ, ತಾಜಾ ಹಣ್ಣುಗಳನ್ನು ಸೇವಿಸುವವರಲ್ಲಿ ಅಪೆಂಡಿಸೈಟಿಸ್ ರೋಗ ಬರುವ ಸಾಧ್ಯತೆ ಕಡಮೆ ಇರುತ್ತದೆ.
1. ಹೊಟ್ಟೆ ನೋವು ಆರಂಭದಲ್ಲಿ ಸಣ್ಣದಾಗಿ ಕಿಬ್ಬೊಟ್ಟೆಯಲ್ಲಿ, ಹೊಕ್ಕಳ ಸುತ್ತ, ಕ್ರಮೇಣ ನೋವಿನ ತೀವ್ರತೆ ಜಾಸ್ತಿಯಾಗಿ ಬಲಭಾಗದ ಕಿಬ್ಬೊಟ್ಟೆಯಲ್ಲಿ ನೋವು ಹೆಚ್ಚು ವ್ಯಾಪಿಸುತ್ತದೆ. ಏನೂ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ನೋವಿನ ತೀವ್ರತೆ ಜಾಸ್ತಿಯಾಗುತ್ತಾ ಹೋಗಿ ಹೊಟ್ಟೆಯ ತಳಭಾಗಕ್ಕೆ ವ್ಯಾಪಿಸುತ್ತದೆ.
2. ಜ್ವರ, ವಾಂತಿ, ವಾಕರಿಕೆ, ಹಸಿವಿಲ್ಲದಿರುವುದು, ಸರ್ವೇ ಸಾಮಾನ್ಯವಾಗಿ ಹೊಟ್ಟೆ ನೋವಿನ ಜೊತೆ ಜೊತೆಯಾಗಿ ಬರುತ್ತದೆ. ನೋವಿನ ಜೊತೆಗೆ ಆರಂಭವಾದ ಜ್ವರ ಹೆಚ್ಚು ಏರುವುದೇ ಇಲ್ಲ. ನಿರಂತರವಾಗಿ 100 ಡಿಗ್ರಿಯಲ್ಲಿ ಇದ್ದೇ ಇರುತ್ತದೆ. ಮಧ್ಯ ಮಧ್ಯದಲ್ಲಿ ಜ್ವರ ಕಡಮೆಯಾಗದೆ, ಒಂದೇ ರೀತಿ ಇರುತ್ತದೆ. ಹಸಿವಿನ ತೀವ್ರತೆ ಕಡಮೆಯಾಗಿ, ವಾಂತಿ ಬರದೇ ಇರಲೂಬಹುದು. ಪದೇ ಪದೇ ವಾಕರಿಕೆ ಬಂದಂತಾಗಬಹುದು, ಕೆಲವೊಮ್ಮೆ ಮಲಬದ್ಧತೆ ಮತ್ತು ಅತೀಭೇದಿಯೂ ಉಂಟಾಗಬಹುದು. ಈ ಲಕ್ಷಣಗಳ ಜೊತೆಗೆ ಮೂತ್ರ ಮಾಡುವಾಗ ನೋವಾಗುವುದು, ಹೊಟ್ಟೆಯ ಸುತ್ತ ಯಾವಾಗಲೂ ಇರುವ ನಿರಂತರ ನೋವು, ಹೊಟ್ಟೆಯಲ್ಲಿನ ಸ್ನಾಯುಗಳು ಹಿಡಿದಂತಾಗಿ ನಿರಂತರವಾದ ನೋವು, ಹೊಟ್ಟೆಯೊಳಗೆ ಗ್ಯಾಸ್ ತುಂಬಿದಂತಾದಲ್ಲಿ ತಕ್ಷಣವೇ ವೈದ್ಯರನ್ನು ಸಂದರ್ಶಿಸತಕ್ಕದ್ದು. ಯಾವುದೇ ಆಹಾರ, ನೀರು, ನೋವು ನಿವಾರಣೆ ಔಷಧಿ, ಗ್ಯಾಸ್ ನಿವಾರಣೆಗೆ ಔಷಧಿ ಅಥವಾ ಸಿರಪ್‌ಗಳನ್ನು ಸೇವಿಸಬಾರದು. ಹೊಟ್ಟೆಯ ಸುತ್ತ ನೋವು ನಿವಾರಣೆಗೆಂದು ಶಾಖ ಕೊಡಲೇ ಬಾರದು. ಈ ರೀತಿ ಮಾಡುವುದರಿಂದ ಅಪೆಂಡಿಕ್ಸ್ ಒಡೆದುಕೊಂಡು, ಅದರೊಳಗಿನ ಕೀವು ಹೊಟ್ಟೆ ಒಳಭಾಗವಾದ ಪೆರಿಟೋನಿಯಲ್ ಕವಚಕ್ಕೆ ಸೇರಿಕೊಂಡು ಪ್ರಾಣಾಪಾಯವಾಗುವ ಸಾಧ್ಯತೆಯೂ ಇರುತ್ತದೆ.
ಪತ್ತೆ ಹಚ್ಚುವುದು ಹೇಗೆ?:
‘ಅಪೆಂಡಿಸೈಟಿಸ್’ ರೋಗವನ್ನು ಪತ್ತೆ ಹಚ್ಚುವುದು ಬಹಳ ಸುಲಭದ ಮಾತಲ್ಲ. ಹೊಟ್ಟೆ ನೋವು ಹಲವಾರು ಕಾರಣಗಳಿಗೆ ಬರುವ ಸಾಧ್ಯತೆ ಇರುತ್ತದೆ. ವಿಷಾಹಾರ ಸೇವನೆ, ಮೂತ್ರ ಕೋಶದ ಸೋಂಕು, ಹೊಟ್ಟೆ ಉರಿಯೂತ, ಸಣ್ಣ ಕರುಳಿನ ಸೋಂಕು, ಮೂತ್ರ ಚೀಲದ ಸೋಂಕು, ಗಾಲ್ ಬ್ಲಾಡರ್ ಸೋಂಕು ಮುಂತಾದ ಕಾರಣಗಳಿಂದ ಹೊಟ್ಟೆ ನೋವು ಬರಬಹುದು. ನುರಿತ ವೈದ್ಯರು ಹಲವಾರು ಪರೀಕ್ಷೆಗಳು ಮತ್ತು ದೇಹದ ಭಾಗಗಳ ನೇರವಾದ ಪರೀಕ್ಷೆ ಮಾಡಿ ರೋಗದ ನಿರ್ಣಯವನ್ನು ಮಾಡುತ್ತಾರೆ. ಸಾಮಾನ್ಯವಾಗಿ ಹೊಟ್ಟೆಯ ಭಾಗವನ್ನು ಕೂಲಂಕುಷವಾಗಿ ಅಭ್ಯಸಿಸುತ್ತಾರೆ. ಅದರ ಜೊತೆಗೆ ಮೂತ್ರ ಪರೀಕ್ಷೆ, ಗುದದ್ವಾರದ ಪರೀಕ್ಷೆ, ರಕ್ತ ಪರೀಕ್ಷೆ ಮಾಡಲಾಗುತ್ತದೆ. ಅಲ್ಟ್ರಾಸೌಂಡ್ ಸ್ಕಾನ್ ಪರೀಕ್ಷೆ ಮುಖಾಂತರ ಅಪೆಂಡಿಕ್ಸ್‌ನ ರಚನೆ, ಗಾತ್ರ ಮತ್ತು ಆಕೃತಿಯ ಬಗ್ಗೆ ಹೆಚ್ಚಿನ ವಿವರವನ್ನು ಪಡೆಯಲಾಗುತ್ತದೆ, ಅಗತ್ಯವಿದ್ದಲ್ಲಿ ಸಿಟಿ ಸ್ಕಾನ್ ಕೂಡಾ ಮಾಡಬೇಕಾಗುತ್ತದೆ.
ಅಪೆಂಡಿಕ್ಸ್ ಊದಿಕೊಂಡಿದ್ದಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ನಿಖರವಾಗಿ ಕಂಡು ಬರುತ್ತದೆ. ಅಪೆಂಡಿಕ್ಸ್‌ನ ಗೋಡೆಗಳು ಮಂದವಾಗಿ ಬದಲಾದಂತೆಯೂ ತಿಳಿದುಬರುತ್ತದೆ. ಸಾಮಾನ್ಯವಾಗಿ ಈ ಚೀಲದ ದಪ್ಪ6 ಮಿ.ಮೀ.ಗಿಂತ ಜಾಸ್ತಿಯಾಗಿದ್ದಲ್ಲಿ ಅಪೆಂಡಿಕ್ಸ್ ಊದಿಕೊಂಡಿದೆ ಎಂದರ್ಥ. 9 ಮಿ.ಮೀ.ಗಿಂತ ಜಾಸ್ತಿ ಇದ್ದಲ್ಲಿ, ಅದು ನಿರ್ದಿಷ್ಟವಾಗಿ ಅಪೆಂಡಿಕ್ಸ್ ಊತ ಎಂದು ತಿಳಿಯಬಹುದು. ಈ ಅಪೆಂಡಿಕ್ಸ್ ಸುತ್ತಲೂ ಕೀವು, ಮಲ ಅಥವಾ ಇನ್ಯಾವುದೇ ದ್ರವಗಳು ಸೇರಿಕೊಂಡಿದೆಯೋ ಎಂಬುದನ್ನು ಕೂಡ ಈ ಪರೀಕ್ಷೆಯಲ್ಲಿ ಪತ್ತೆ ಹಚ್ಚಬಹುದು. ಇದರ ಜೊತೆಗೆ ರಕ್ತ ಪರೀಕ್ಷೆ ಮಾಡಿದಾಗ ಬಿಳಿರಕ್ತಕಣಗಳ ಸಂಖ್ಯೆ 10 ಸಾವಿರಕ್ಕಿಂತ ಜಾಸ್ತಿ ಇದ್ದಲ್ಲಿ ಅಪೆಂಡಿಸೈಟಿಸ್ ಸಮಸ್ಯೆ ಎಂದು ಖಚಿತವಾಗುತ್ತದೆ. ಒಟ್ಟಿನಲ್ಲಿ ಎಲ್ಲ ಪರೀಕ್ಷೆಗಳ ಮುಖಾಂತರ ರೋಗ ನಿರ್ಣಯ ಮಾಡುತ್ತಾರೆ. ಕೆಲವೊಮ್ಮೆ ಆರಂಭಿಕ ಹಂತದಲ್ಲಿ ಊತ ಇದ್ದಲ್ಲಿ, ವೈದ್ಯರು ಆ್ಯಂಟಿ ಬಯೋಟಿಕ್ ನೀಡಿ ಶಸ್ತ್ರ ಚಿಕಿತ್ಸೆಯನ್ನು ಮುಂದೂಡುತ್ತಾರೆ. ನೋವು ನಿವಾರಣೆಯಾಗದಿದ್ದಲ್ಲಿ ಅಥವಾ ಪದೇ ಪದೇ ಹೊಟ್ಟೆ ನೋವು ಬರುತ್ತಿದ್ದಲ್ಲಿ ಶಸ್ತ್ರ ಚಿಕಿತ್ಸೆ ಅನಿವಾರ್ಯ. ಔಷಧಿ ನಿರ್ಣಯ ಮತ್ತು ಶಸ್ತ್ರ ಚಿಕಿತ್ಸೆಯ ಆವಶ್ಯಕತೆ ಹಾಗೂ ಅನಿವಾರ್ಯತೆಯ ಬಗ್ಗೆ ಸರಿಯಾದ ನಿರ್ಧಾರವನ್ನು ನಿಮ್ಮ ವೈದ್ಯರು ಸಕಾಲದಲ್ಲಿ ತೆಗೆದುಕೊಳ್ಳುತ್ತಾರೆ. ಈ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಮತ್ತು ಹೊಣೆಗಾರಿಕೆಯನ್ನು ವೈದ್ಯರಿಗೆ ಬಿಡತಕ್ಕದ್ದು.
ಚಿಕಿತ್ಸೆ ಹೇಗೆ
‘ಅಪೆಂಡಿಸೈಟಿಸ್’ ರೋಗ ಔಷಧಿಗಳಿಂದ ಕಡಿಮೆಯಾಗುವ ರೋಗವಲ್ಲ. ಶೇ. 99ರಷ್ಟು ಶಸ್ತ್ರ ಚಿಕಿತ್ಸೆಯ ಆವಶ್ಯಕತೆ ಇರುತ್ತದೆ. ಮೂರುವರೆ ಇಂಚು ಉದ್ದದ ಈ ಅಪೆಂಡಿಕ್ಸ್ ಭಾಗವನ್ನು ಶಸ್ತ್ರ ಚಿಕಿತ್ಸೆಯಿಂದ ಕಿತ್ತ್ತುಹಾಕಿದಲ್ಲಿ ಎಲ್ಲವೂ ಸುಗಮವಾಗುತ್ತದೆ. ಕರುಳಿನ ಭಾಗವಾದ ಈ ಅಪೆಂಡಿಕ್ಸ್‌ನ ಪಾತ್ರ ಜೀರ್ಣಕ್ರಿಯೆಯಲ್ಲಿ ಏನು ಎಂಬುದು ಈ ವರೆಗೂ ತಿಳಿದಿಲ್ಲ. ಆದರೆ ಒಂದಂತೂ ಸತ್ಯ, ಶಸ್ತ್ರ ಚಿಕಿತ್ಸೆ ಮಾಡಿ ಅಪೆಂಡಿಕ್ಸ್ ತೆಗೆದಲ್ಲಿ ವ್ಯಕ್ತಿಯ ಜೀರ್ಣ ಪ್ರಕ್ರಿಯೆಗೆ ಮತ್ತು ಆರೋಗ್ಯದ ಮೇಲೆ ಯಾವುದೇ ದುಷ್ಟರಿಣಾಮವಿರುವುದಿಲ್ಲ.
ಅಪೆಂಡಿಸೈಟಿಸ್ ಎಂದು ಖಚಿತವಾಗಿ ನಿರ್ಧಾರವಾದ ಬಳಿಕ ನೋವು ತೀವ್ರ ಇರುವಾಗ ಆದಷ್ಟು ಬೇಗ ಸರ್ಜರಿ ಮಾಡಿಸುವುದು ಸೂಕ್ತ. ಇಂತಹ ಸಂದರ್ಭಗಳಲ್ಲಿ ಸಮಯ ವೃಥಾ ವ್ಯತ್ಯಯ ಮಾಡಿದ್ದಲ್ಲಿ, ಅಪೆಂಡಿಕ್ಸ್ ಒಡೆದುಕೊಂಡು ಅದರೊಳಗಿನ ಕೀವು, ಮಲದ ಗಟ್ಟಿ ಎಲ್ಲವೂ ಹೊರ ಚೆಲ್ಲಿ ಪೆರಿಟೋನಿಯಲ್ ಕವಚಕ್ಕೆ ಸೇರಿಕೊಂಡು ವಿಪರೀತ ಸೋಂಕು ತಗಲುವ ಸಾದ್ಯತೆ ಇದೆ. ಹೀಗಾದಲ್ಲಿ ಅಪೆಂಡಿಕ್ಸ್‌ನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆದ ಬಳಿಕ, ಪೆರಿಟೋನಿಯಲ್ ವಾಷ್, ಮಾಡಿ ಹೊಟ್ಟೆಯೊಳಗಿನ ಕಲ್ಮಶಗಳನ್ನು ಶುಭ್ರವಾಗಿ ತೆಗೆಯಬೇಕಾದ ಅನಿವಾರ್ಯತೆ ಇರುತ್ತದೆ ಒಟ್ಟಿನಲ್ಲಿ ನಿಮ್ಮ ರೋಗದ ಲಕ್ಷಣ ತೀವ್ರತೆ ಮತ್ತು ನಿಮ್ಮ ದೇಹ ಸ್ಥಿತಿಯನ್ನು ಅಭ್ಯಸಿಸಿ ವೈದ್ಯರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ವೈದ್ಯರಿಗೆ ನಿಮ್ಮ ಸಮ್ಮತಿ ನೀಡಿದಲ್ಲಿ ಎಲ್ಲವೂ ಸುಖ್ಯಾಂತವಾಗಬಹುದು.