ಭಾರತದ ಬರಗಾಲಕ್ಕೆ ಕಾರಣವೇನು ಗೊತ್ತೇ ?

ಹೊಸದಿಲ್ಲಿ, ಎ.22: ಯೂರೋಪ್‌ನಲ್ಲಿ ಮಿತಿಮೀರಿದ ಮಾಲಿನ್ಯದಿಂದಾಗಿ ಭಾರತದಲ್ಲಿ ಭೀಕರ ಬರಗಾಲ ಎದುರಾಗಿದೆ. ಇತಿಹಾಸದಲ್ಲೇ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಎನಿಸಿದ ಇದರಿಂದಾಗಿ 13 ಕೋಟಿ ಮಂದಿಗೆ ಸಂಕಷ್ಟ ಎದುರಾಗಿದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.
ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಘಟಕಗಳಿಂದ ಹೊರಸೂಸುವ ಗಂಧಕದ ಡೈ ಆಕ್ಸೈಡ್, ಹಲವು ಹಾನಿಕಾರಕ ಪರಿಣಾಮಗಳನ್ನು ಬೀರುತ್ತವೆ. ಆಮ್ಲಮಳೆ, ಹೃದ್ರೋಗ ಹಾಗೂ ಶ್ವಾಸಕೋಶದ ರೋಗಗಳಿಗೆ ಇದು ಕಾರಣವಾಗುತ್ತದೆ. ಇದು ಗಿಡಗಳ ಬೆಳವಣಿಗೆಯನ್ನೂ ತಡೆಯುತ್ತದೆ ಎಂದು ಸಂಶೋಧನಾ ವರದಿ ವಿವರಿಸಿದೆ.
ಉತ್ತರ ಧ್ರುವದಿಂದ ಹೊರಸೂಸುವ ಇಂಥ ಮಾಲಿನ್ಯಕಾರಕ ಅಂಶಗಳು, ದಕ್ಷಿಣ ಧ್ರುವದ ಉಷ್ಣತೆಯ ಬದಲಾವಣೆಗೆ ಕಾರಣವಾಗುತ್ತದೆ. ಉಷ್ಣವಲಯದ ಮಳೆಪ್ರದೇಶದ ಮೇಲೆ ಇದು ಭೀಕರ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ದೊಡ್ಡ ಪ್ರಮಾಣದ ಗಂಧಕ ಡೈ ಆಕ್ಸೈಡ್ ಹೊರಸೂಸುವಿಕೆಯಿಂದ 2000ನೇ ಇಸವಿಯಲ್ಲಿ ಭಾರತದ ಮಳೆ ಪ್ರಮಾಣದ ಮೇಲೆ ಹೇಗೆ ಪರಿಣಾಮವಾಯಿತು ಎಂಬುದನ್ನು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರು ಲೆಕ್ಕ ಹಾಕಿದ್ದಾರೆ.
ಉತ್ತರ ಧ್ರುವದ ಮಾಲಿನ್ಯಕಾರಕ ಅನಿಲು ಹೊರಸೂಸುವಿಕೆಯಿಂದ ವಾಯವ್ಯ ಭಾರತದಲ್ಲಿ ಶೇಕಡ 40ರಷ್ಟು ಮಳೆ ಕಡಿಮೆಯಾಗಿದೆ. ಯೂರೋಪ್ ಮಾಲಿನ್ಯವೊಂದರಿಂದಲೇ ವಾಯವ್ಯ ಮತ್ತು ನೈರುತ್ಯ ಭಾರತದಲ್ಲಿ ಶೇಕಡ 10ರಷ್ಟು ಮಳೆ ಕಡಿಮೆಯಾಗಿದೆ ಎಂದು ಅಪೊಸ್ಟೊಲಸ್ ವೊಲ್ಗಾರ್ಕಿಸ್ ಹೇಳಿದ್ದಾರೆ. ಒಂದು ಕಡೆಯ ಮಾಲಿನ್ಯ ಮತ್ತೊಂದು ಕಡೆಯ ಹವಾಮಾನದ ಮೇಲೆ ಭೀಕರ ಪರಿಣಾಮ ಬೀರುತ್ತದೆ ಎನ್ನುವುದು ಸಾಬೀತಾಗಿದೆ ಎಂದು ವಿವರಿಸಿದ್ದಾರೆ.







