ಸೇತುವೆಯಲ್ಲೇ ಉರುಳಿದ ಮೀನು ಸಾಗಾಟದ ಲಾರಿ: ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

ಕಾಸರಗೋಡು, ಎ.22: ಮೀನು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಲ್ಲೇ ಉರುಳಿದ ಪರಿಣಾಮ ಓರ್ವ ಹೊಳೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಶನಿವಾರ ಮುಂಜಾನೆ ಕಾಂಞಗಾಡ್-ಕಾಸರಗೋಡು ರಾಜ್ಯ ಹೆದ್ದಾರಿಯ ಚಂದ್ರಗಿರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಆಲಪ್ಪುಝ ಜಿಲ್ಲೆಯ ಪುನ್ನಪ್ರ ಗ್ರಾಮ ನಿವಾಸಿ ನಾಸರ್(36) ಎಂದು ಗುರುತಿಸಲಾಗಿದೆ. ಲಾರಿ ಚಲಾಯಿಸುತ್ತಿದ್ದ ಹಾರಿಸ್(35) ಎಂಬವರು ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ ಐದು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಗೋವಾದಿಂದ ಅಲಪ್ಪುಝುಕ್ಕೆ ಮೀನು ಹೇರಿಕೊಂಡು ಬರುತ್ತಿದ್ದ ಲಾರಿ ಎದುರಿನಿಂದ ಬರುತ್ತಿದ್ದ ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸೇತುವೆಯ ತಡೆಗೋಡೆಗೆ ಢಿಕ್ಕಿಯಾಗಿ ಸೇತುವೆ ಮೇಲೆಯೇ ಮಗುಚಿ ಬಿದ್ದಿದೆ. ಲಾರಿ ಹೊಳೆಗೆ ಬೀಳುವುದರಲ್ಲಿ ಕೂದಲೆಲೆ ಅಂತರದಲ್ಲಿ ತಪ್ಪಿದೆ. ಆದರೂ ಅಪಘಾತದ ರಭಸಕ್ಕೆ ನಾಸರ್ ಹೊಳೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ದಳ, ಕರಾವಳಿ ಪಡೆ ಹಾಗೂ ಸ್ಥಳೀಯರು ಶೋಧ ನಡೆಸಿದರೂ ನಾಸರ್ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಗಂಟೆಗಳ ಬಳಿಕ ಚೆಮ್ನಾಡ್ ಸಮೀಪದ ಹೊಳೆಯಲ್ಲಿ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.
ಮೃತದೇಹವನ್ನು ಮೇಲೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗರದಲ್ಲಿರಿಸಲಾಗಿದೆ. ದುರಂತದ ಸುದ್ದಿ ತಿಳಿದು ಆಲಪ್ಪುಝದಲ್ಲಿರುವ ನಾಸರ್ ಕುಟುಂಬಸ್ಥರು ಕಾಸರಗೋಡಿಗೆ ಪ್ರಯಾಣ ಬೆಳೆಸಿದ್ದಾರೆ.
ಅಪಘಾತದ ಬಳಿಕ ಗಂಟೆಗಳ ಕಾಲ ಕಾಂಞಗಾಡ್-ಕಾಸರಗೋಡು ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.







