ಕೇಂದ್ರ ಸರಕಾರದ ನೋಟು ರದ್ದತಿ ಈಗ ಶಾಲ ಮಕ್ಕಳಿಗೆ ಪಾಠ !

ಹೊಸದಿಲ್ಲಿ ಎ.22: ನರೇಂದ್ರಮೋದಿ ಸರಕಾರ ಶಾಲಾ ಪಾಠಪುಸ್ತಕಗಳನ್ನು ಪರಿಷ್ಕರಿಸಲಿದ್ದು, ಎನ್‌ಸಿಇಆರ್‌ಟಿಯ ಪಾಠಪುಸ್ತಕದಲ್ಲಿ ನೋಟು ಅಮಾನ್ಯೀಕರಣದಂತಹ ಘಟನೆಯನ್ನು ಸೇರಿಸಲು ನಿರ್ಧರಿಸಿದೆ. ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆದ ಘಟನೆಗಳನ್ನು ಸುಧಾರಿತ ಪಾಠ ಪುಸ್ತಕಕ್ಕೆ ಸೇರಿಸಲು ನಿಶ್ಚೈಸಿದೆ, ಅದರಲ್ಲಿ ನೋಟು ಅಮಾನ್ಯೀಕರಣವೂ ಮಕ್ಕಳಿಗೆ ಕಲಿಕಾ ವಿಷಯವಾಗಲಿದೆ ಎಂದು ವರದಿಯಾಗಿವೆ.
ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪಾಠಪುಸ್ತಕಕ್ಕೆ ಸಂಬಂಧಿಸಿದ ಅನೇಕ ವಿವಾದಗಳು ಸೃಷ್ಟಿಯಾಗಿದ್ದವು. ರಾಜಸ್ಥಾನ, ಹರ್ಯಾಣ ಮುಂತಾದ ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಲ್ಲಿ ಸಿದ್ಧಪಡಿಸಲಾದ ಪಾಠಪುಸ್ತಕಗಳ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರವರ ಕುರಿತ ಪಾಠವನ್ನು ರಾಜಸ್ತಾನ ಸರಕಾರ ಕಿತ್ತುಹಾಕಿತ್ತು. ಹರಿಯಾಣ ಸರಕಾರ ಆರೆಸ್ಸೆಸ್ ನಾಯಕ ದೀನನಾಥ್ ಭತ್ರಾರ ಚಿಂತನೆಗಳನ್ನು ಪುಸ್ತಕದಲ್ಲಿ ಅಳವಡಿಸಿಕೊಂಡಿತ್ತು.
ಪಾಠ ಪುಸ್ತಕಗಳ ಪರಿಷ್ಕರಣೆ ಬಗ್ಗೆ ಅಧ್ಯಯನ ನಡಸಲು ಸಮಿತಿ ನೇಮಿಸಲಾಗಿದೆ ಎಂದು ಎನ್‌ಸಿಆರ್‌ಟಿ ತಿಳಿಸಿದೆ. ಸಿಬಿಎಸ್‌ಇ ಸ್ಕೂಲ್‌ಗಳು ಮತ್ತು ಕೇಂದ್ರ ವಿದ್ಯಾಲಯಗಳು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಬಳಸುತ್ತವೆ. ಇದಕ್ಕೆಮೊದಲು ಕೊನೆಯದಾಗಿ 2005ರಲ್ಲಿ ಪುಸ್ತಕಗಳ ಪರಿಷ್ಕರಣೆ ಆಗಿತ್ತು.





