ಯಾವುದೇ ಧರ್ಮದ ವಿರುದ್ಧ ಉದ್ದೇಶಪೂರ್ವಕವಲ್ಲದ ಅವಮಾನ ಅಪರಾಧವಾಗುವುದಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಎ.22: ಯಾವುದೇ ಧರ್ಮ ಅಥವಾ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಉದ್ದೇಶಪೂರ್ವಕವಲ್ಲದ ಹಾಗೂ ಅಜಾಗರೂಕತೆಯಿಂದ ಮಾಡಿದ ಅವಮಾನ ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಯಾವುದೇ ಧರ್ಮದ ವಿರುದ್ಧ ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ ಮಾಡಲಾದ ನಿಂದನೆ ಹಾಗೂ ಅವಮಾನ ಮಾತ್ರ ಅಪರಾಧಕ್ಕೆ ಸಮನಾಗುತ್ತದೆ ಎಂದೂ ಸುಪ್ರೀಂ ಕೋರ್ಟ್ ತಿಳಿಸಿದೆ ಅಲ್ಲದೆ ಈ ನಿಟ್ಟಿನಲ್ಲಿ ರಾಮಜಿ ಲಾಲ್ ಮೋದಿ ಹಾಗೂ ಉತ್ತರ ಪ್ರದೇಶ ಸರಕಾರದ ನಡುವಿನ 60 ವರ್ಷ ಹಳೆಯದಾದ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ಸೆಕ್ಷನ್ 295 ಎ ಉಲ್ಲೇಖಿಸಿ ನೀಡಿದ ತೀರ್ಪನ್ನೂ ಜಸ್ಟಿಸ್ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ಸಂದರ್ಭ ನೆನಪಿಸಿಕೊಂಡಿದೆ.
ಧರ್ಮವೊಂದನ್ನು ಅವಮಾನಿಸಬೇಕೆಂಬ ಪೂರ್ವನಿಯೋಜಿತ ಉದ್ದೇಶದಿಂದ ನಡೆಸಲಾದ ಕೃತ್ಯ ಮಾತ್ರ ಸಾರ್ವಜನಿಕ ಶಾಂತಿಯನ್ನು ಕದಡಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಮ್ಯಾಗಜೀನ್ ಮುಖಪುಟವೊಂದರಲ್ಲಿ ಕ್ರಿಕೆಟಿಗ ಎಂ.ಎಸ್.ಧೋನಿಯನ್ನು ವಿಷ್ಣುವಿನಂತೆ ಬಿಂಬಿಸಿ ಹಾಕಲಾಗಿದ್ದ ಫೋಟೋ ವಿರೋಧಿಸಿ ಧೋನಿ ವಿರುದ್ಧ ಸೆಕ್ಷನ್ 295ಎ ಅನ್ವಯ ದಾಖಲಾದ ಪ್ರಕರಣದ ಬಗ್ಗೆ ತನ್ನ ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ. ಧೋನಿ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿರುವ ನ್ಯಾಯಾಲಯ ಮೇಲಿನಂಶವನ್ನು ಪರಿಗಣನೆಗೆ ತೆಗೆದುಕೊಂಡೇ ಕೆಳಗಿನ ಹಂತದ ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಮುಂದಡಿಯಿಡಬೇಕೆಂದು ಹೇಳಿದೆ.







