ಬರ್ಖಾ ಸಿಂಗ್ ಬಿಜೆಪಿಗೆ ಸೇರ್ಪಡೆ

ಹೊಸದಿಲ್ಲಿ,ಎ.22: ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ ಸನ್ನಿಹಿತವಾಗಿರುವಾಗ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಲ್ಲಿ ಶುಕ್ರವಾರ ಕಾಂಗ್ರೆಸ್‌ನಿಂದ ಉಚ್ಚಾಟಿಸಲ್ಪಟ್ಟಿದ್ದ ಪಕ್ಷದ ಮಾಜಿ ನಾಯಕಿ ಬರ್ಖಾ ಸಿಂಗ್ ಅವರು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ದಿಲ್ಲಿ ಉಸ್ತುವಾರಿ ಶ್ಯಾಮ ಜಾಜು ಅವರು ಬರ್ಖಾರನ್ನು ಪಕ್ಷಕ್ಕೆ ಬರಮಾಡಿಕೊಡರು.
ತಾನು ಯಾವುದೇ ಪಕ್ಷವನ್ನು ಸೇರುವುದಿಲ್ಲವೆಂದು ಮೊದಲು ಹೇಳಿದ್ದ ಬರ್ಖಾ ಬಿಜೆಪಿಗೆ ಸೇರ್ಪಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ತನಗೆ ಬಾಗಿಲು ತೋರಿಸಿದ ಬಳಿಕ ಬಿಜೆಪಿಗೆ ಸೇರುವುದು ಅನಿವಾರ್ಯವಾಗಿದೆ ಎಂದರು.
ತ್ರಿವಳಿ ತಲಾಖ್ ವಿಷಯದಲ್ಲಿ ತಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೆ. ಆದರೆ ಆ ವಿಷಯವನ್ನು ಕೈಬಿಡುವಂತೆ ಇಲ್ಲವೇ ಪಕ್ಷದಿಂದ ಉಚ್ಚಾಟಿಸುವುದಾಗಿ ಕಾಂಗ್ರೆಸ್ ತನಗೆ ಸೂಚಿಸಿತ್ತು. ಅದೀಗ ತನ್ನ ನಿಜವಾದ ಮುಖವನ್ನು ತೋರಿಸಿದೆ. ಆ ಪಕ್ಷದಲ್ಲಿ ಸ್ವಜನ ಪಕ್ಷಪಾತ ಹೆಚ್ಚಾಗಿದೆ. ತಾನು ಕಾಂಗ್ರೆಸ್ ಸದಸ್ಯೆಯಾಗಿದ್ದೆ ಎನ್ನುವುದು ಬೇಸರ ,ನಿರಾಶೆಯನ್ನುಂಟು ಮಾಡಿದೆ ಎಂದು ಅವರು ತಿಳಿಸಿದರು.