ಐದರ ಹರೆಯದ ಬಾಲಕಿಯ ಅತ್ಯಾಚಾರಿಯನ್ನು ಥಳಿಸಿ ಕೊಂದ ಗ್ರಾಮಸ್ಥರು

ರಾಂಚಿ,ಎ.22: ಐದರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಕುತ್ತಿಗೆಯವರೆಗೆ ಮರಳಿನಲ್ಲಿ ಹೂತಿದ್ದ 25ರ ಹರೆಯದ ಯುವಕನೋರ್ವನನ್ನು ಥಳಿಸಿ ಕೊಲ್ಲುವ ಮೂಲಕ ಉದ್ರಿಕ್ತ ಗ್ರಾಮಸ್ಥರು ತಮ್ಮದೇ ಆದ ರೀತಿಯಲ್ಲಿ ‘ನ್ಯಾಯದಾನ ’ಮಾಡಿದ್ದಾರೆ.
ಇದು ಜಾರ್ಖಂಡ್‌ನಲ್ಲಿ ಈ ವರ್ಷ ‘ಗುಂಪು ನ್ಯಾಯ ’ದ ಮೊದಲ ಪ್ರಮುಖ ಘಟನೆಯಾಗಿರುವಂತಿದೆ. ಉದ್ರಿಕ್ತ ಜನರು ಶುಕ್ರವಾರ ಬೆಳಗಿನ ಜಾವ ಅತ್ಯಾಚಾರಿಯ ಗುಡಿಸಲಿಗೆ ನುಗ್ಗಿ ಆತನನ್ನು ಹೊರಗೆಳೆದು ತಂದು ಪ್ರಜ್ಞೆ ಕಳೆದುಕೊಳ್ಳುವವರೆಗೂ ದೊಣ್ಣೆ, ಬೆಲ್ಟ್, ಚಪ್ಪಲಿ ಮತ್ತು ಕಲ್ಲುಗಳಿಂದ ಥಳಿಸಿದ್ದಾರೆ. ಮಧ್ಯಾಹ್ನ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಆತ ಅಸು ನೀಗಿದ್ದಾನೆ.
ರಾಂಚಿಯಿಂದ ಸುಮಾರು 100 ಕಿ.ಮೀ.ಅಂತರದಲ್ಲಿರುವ ಚಾಂದಿಲ್ ಬ್ಲಾಕ್‌ನ ಸುಖಸಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮಸ್ಥರು ಹೇಳುವಂತೆ ಹತ ಜವಾಹರ್ ಲೋಹಾರ್ ಐದರ ಹರೆಯದ ಬಾಲಕಿಯನ್ನು ಅಪಹರಿಸಿ, ತನ್ನ ಗುಡಿಸಲಿನಲ್ಲಿ ಆಕೆಯ ಮೇಲೆ ಪದೇಪದೇ ಅತ್ಯಾಚಾರವೆಸಗಿದ್ದ. ಬಳಿಕ ಆಕೆ ಪರಾರಿಯಾಗದಂತಿರಲು ಮರಳಿನಲ್ಲಿ ಕುತ್ತಿಗೆಯವರೆಗೆ ಹೂತಿದ್ದ. ಬಾಲಕಿಯನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿಕೊಳ್ಳಲು ವೈದ್ಯಕೀಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ನಸುಕಿನ ಮೂರು ಗಂಟೆಯ ಸುಮಾರಿಗೆ ಬಾಲಕಿಯನ್ನು ಲೋಹಾರ್‌ನ ಗುಡಿಸಲಿನಲ್ಲಿ ಪತ್ತೆ ಹಚ್ಚಿದ್ದ ಗ್ರಾಮಸ್ಥರು ಆಕ್ರೋಶಗೊಂಡು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದರು.
ಜಾರ್ಖಂಡ್‌ನ ಬುಡಕಟ್ಟು ಪ್ರಾಬಲ್ಯದ ಗ್ರಾಮೀಣ ಪ್ರದೇಶಗಳಲ್ಲಿ ‘ಗುಂಪು ನ್ಯಾಯ ’ಹೆಚ್ಚು ಪ್ರಚಲಿತದಲ್ಲಿದೆ. ಮೊಬೈಲ್ ಫೋನ್‌ಗಳ ಕಳ್ಳತನದಂತಹ ಸಣ್ಣಪುಟ್ಟ ಅಪರಾಧಗಳಿಗೂ ಹಲವಾರು ಪುಡಿ ಕ್ರಿಮಿನಲ್‌ಗಳನ್ನು ಗುಂಪುಗಳು ಥಳಿಸಿ ಕೊಂದಿವೆ. ಉದ್ರಿಕ್ತ ಗುಂಪುಗಳ ಕೈಗೆ ಸಿಕ್ಕಿ ಸಾವನ್ನಪ್ಪುವವರಲ್ಲಿ ಹೆಚ್ಚಿನವರು ಲೈಂಗಿಕ ದೌರ್ಜನ್ಯಗಳ ಆರೋಪಿಗಳೇ ಆಗಿದ್ದಾರೆ.
2013,ಫೆ.16ರಂದು ಗುಮ್ಲಾ ಜಿಲ್ಲೆಯ ಸ್ವಾರಿಯಾ ಗ್ರಾಮದಲ್ಲಿ ಸ್ಥಳೀಯ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಮೂವರು ಯುವಕರು ಗುಂಪಿನ ರೋಷಕ್ಕೆ ಬಲಿಯಾಗಿದ್ದರು. 2014,ಆಗಸ್ಟ್‌ನಲ್ಲಿ ಸರಾಯ್‌ಕೇಲಾ-ಖರ್ಸವಾನ ಜಿಲ್ಲೆಯಲ್ಲಿ 35ರ ಹರೆಯದ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದ ರಾಧಾಮೋಹನ್ ಮುಂಡಾ (50) ಎಂಬಾತನನ್ನು ಗುಂಪು ಥಳಿಸಿ ಕೊಂದುಹಾಕಿತ್ತು.
2012ರಿಂದೀಚಿಗೆ ರಾಜ್ಯದಲ್ಲಿ ಇಂತಹ ಕನಿಷ್ಠ ಐದು ಘಟನೆಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.