ಬಾಂಬ್ ನಾಗ ಇನ್ನೂ ಬಂಧನವಾಗಿಲ್ಲ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಎ.22: ರೌಡಿಶೀಟರ್ ಬಾಂಬ್ ನಾಗ ಇನ್ನೂ ಬಂಧನವಾಗಿಲ್ಲ. ಪೊಲೀಸರು ಆತನಿಗಾಗಿ ಶೋಧ ಮುಂದುವರಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ಬಾಂಬ್ ನಾಗನ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ದಾಳಿ ನಡೆಸಿ ನಾಗನ ಮನೆಯಲ್ಲಿದ್ದ ಹಳೆಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ದಿನಕ್ಕೊಂದು ಜಾಗ ಬದಲಿಸುತ್ತಿರುವ ಬಾಂಬ್ ನಾಗನನ್ನು ಟ್ರ‍್ಯಾಕ್ ಮಾಡಿ ಪೊಲೀಸರು ಬಂಧಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
"ಬಾಂಬ್ ನಾಗನ ಬಂಧನದ ಬಳಿಕ ಪೊಲೀಸರು ತನಿಖೆ ನಡೆಸಿ ಅವನ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ತನಿಖೆಯ ಬಳಿಕ ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆಂದು ಗೊತ್ತಾಗಲಿದೆ. ಪ್ರಕರಣದಲ್ಲಿ ಅವನೊಂದಿಗೆ ಪೊಲೀಸರು ,ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ನನಗೇನು ಮಾಹಿತಿ ಇಲ್ಲ. ಈ ಬಗ್ಗೆ ಗುಪ್ತಚರ ಮಾಹಿತಿಯೂ ನನಗೆ ಬಂದಿಲ್ಲ” ಎಂದರು.
ಕೆಪಿಸಿಸಿ ಕಾರ್ಯಧ್ಯಕ್ಷ, ಬಿಜೆಪಿ ಮುಖಂಡರ ಹೆಸರನ್ನು ಬಾಂಬ್ ನಾಗ ಉಲ್ಲೇಖಿಸಿರುವ ಬಗ್ಗೆ ನನಗೇನು ಗೊತ್ತಿಲ್ಲ. ಬಾಂಬ್ ನಾಗ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದು ಜಿ.ಪರಮೇಶ್ವರ‍್ ಹೇಳಿದರು.





