ಕಚ್ಚಾ ಬಾಂಬ್ ತಯಾರಿ ವೇಳೆ ಸ್ಫೋಟ,ಎಂಟು ಜನರ ಸಾವು

ಕೋಲ್ಕತಾ,ಎ.22: ಪಶ್ಚಿಮ ಬಂಗಾಲದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಪರಸ್ಪರ ಕಾದಾಟದಲ್ಲಿ ತೊಡಗಿದ್ದ ವಿರೋಧಿ ಗುಂಪುಗಳಿಗೆ ಪೂರೈಸಲು ಕಚ್ಚಾ ಬಾಂಬ್‌ಗಳ ತಯಾರಿಕೆ ಸಂದರ್ಭ ಸ್ಫೋಟ ಸಂಭವಿಸಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ.
ಬೀರ್‌ಭೂಮ್ ಜಿಲ್ಲೆಯ ತಾರ್ಕಾ ಗ್ರಾಮದಲ್ಲಿ ಅಪರಾಹ್ನ ಎರಡು ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಡಝನ್ನಿಗೂ ಅಧಿಕ ಜನರು ಬಾಂಬ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಪೊಲೀಸರು ತಿಳಿಸಿದರು.
ಲಾಭಪುರ ಪೊಲೀಸ್ ಠಾಣಾ ವ್ಯಾಪ್ತಿಯ ದರ್ಬಾರಪುರ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಯಿಂದ ವಿರೋಧಿ ಮರಳು ಮಾಫಿಯಾ ಗ್ಯಾಂಗ್‌ಗಳು ಪರಸ್ಪರರ ಮೇಲೆ ಕಚ್ಚಾ ಬಾಂಬ್‌ಗಳನ್ನು ಎಸೆಯಲು ಆರಂಭಿಸಿದ್ದವು. ಹೆಚ್ಚಿನ ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಪರಾರಿಯಾಗಿದ್ದರೆ, ಹಲವಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲೆಗಳಲ್ಲಿ ಗಂಟೆಗಟ್ಟಲೆ ಸ್ವಯಂ ಬಂಧಿಗಳಾಗಿದ್ದರು.
ದರ್ಬಾರಪುರ ಗ್ರಾಮದಿಂದ ಒಂದು ಕಿ.ಮೀ.ಗೂ ಕಡಿಮೆ ಅಂತರದಲ್ಲಿರುವ ತಾರ್ಕಾದಲ್ಲಿ ಮನೆಯೊಂದರ ಹಿಂದಿನ್ ಶೆಡ್‌ನಲ್ಲಿ ಸುಮಾರು 10-15 ಜನರು ಘರ್ಷಣೆಯಲ್ಲಿ ತೊಡಗಿದ್ದ ಒಂದು ಗುಂಪಿಗೆ ಪೂರೈಸಲು ಕಚ್ಚಾ ಬಾಂಬ್‌ಗಳ ತಯಾರಿಕೆಯಲ್ಲಿ ನಿರತರಾಗಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.
ಸ್ಫೋಟದ ತೀವ್ರತೆಯಿಂದಾಗಿ ಮೃತರ ದೇಹಗಳು ಛಿದ್ರಗೊಂಡು ಅಂಗಾಂಗಗಳು ಎಲ್ಲಿ ಬೇಕೆಂದರಲ್ಲಿ ಹರಡಿಬಿದ್ದಿದ್ದವು. ಇಲ್ಲಿಯೂ ಸ್ಥಳೀಯರು ಪೊಲೀಸ್ ಕ್ರಮಕ್ಕೆ ಬೆದರಿ ಪರಾರಿಯಾಗಿದ್ದಾರೆ.
ಬೈಕ್‌ಗಳಲ್ಲಿ ಬಂದಿದ್ದ ಸಿಪಿಎಂ ಕಾರ್ಯಕರ್ತರು ಬಾಂಬ್‌ಗಳನ್ನೆಸೆದು ಪರಾರಿ ಯಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ ಜಿಲ್ಲಾಧ್ಯಕ್ಷ ಅನುಬೃತ ಮಂಡಲ್ ದೂರಿದರೆ, ಘರ್ಷಣೆಯಲ್ಲಿ ತೊಡಗಿದ್ದವರು ಪರಸ್ಪರ ವಿರೋಧಿ ತೃಣಮೂಲ ಬಣಗಳಾಗಿದ್ದು, ಬಾಂಬ್ ತಯಾರಿಕೆ ನಡೆಯುತ್ತಿದ್ದ ಮನೆ ತೃಣಮೂಲ ಕಾರ್ಯಕರ್ತನಿಗೆ ಸೇರಿದ್ದಾಗಿದೆ ಎಂದು ಸ್ಥಳೀಯ ಸಿಪಿಎಂ ನಾಯಕ ರಾಮಚಂದ್ರ ಡೋಮ್ ಆರೋಪಿಸಿದ್ದಾರೆ.







