ವಿಲೀನಗೊಳ್ಳುವ ಮೊದಲೇ ಎಐಎಡಿಎಂಕೆ ಬಣಗಳ ನಡುವೆ ಸಿಎಂ ಹುದ್ದೆಗೆ ಕಚ್ಚಾಟ

ಚೆನ್ನೈ, ಎ.22: ಎಐಎಡಿಎಂಕೆಯ ಎರಡು ಪ್ರತ್ಯೇಕ ಬಣಗಳ ನಡುವೆ ವಿಲೀನ ಮಾತುಕತೆ ಇನ್ನೂ ಮುಗಿದಿಲ್ಲ. ಆದರೆ ಇದಕ್ಕೂ ಮೊದಲೇ ವಿಲೀನಗೊಂಡ ಬಳಿಕ ಮುಖ್ಯ ಮಂತ್ರಿ ಯಾರಾಗಬೇಕೆಂದು ಹಾಲಿ ಮುಖ್ಯ ಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಮುಖ್ಯ ಮಂತ್ರಿ ಓ.ಪನ್ನೀರ್ ಸೆಲ್ವಂ ಬಣಗಳ ನಡುವೆ ಕಚ್ಚಾಟ ಆರಂಭಗೊಂಡಿದೆ.
ಯಾವುದೇ ಬಣಕ್ಕೂ ಪೂರ್ಣ ಬಹುಮತ ಇಲ್ಲ. ಹೀಗಿರುವಾಗ ಅಧಿಕಾರರೂಢ ಮುಖ್ಯ ಮಂತ್ರಿ ಪಳನಿಸ್ವಾಮಿ ಬಣದ ನಾಯಕರು ಪಳನಿ ಸ್ವಾಮಿಯೇ ಮುಖ್ಯ ಮಂತ್ರಿಯಾಗಿ ಮುಂದುವರಿಯಬೇಕು. ಓ.ಪನ್ನೀರ್ ಸೆಲ್ವಂ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಂಡರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಮುಖ್ಯ ಮಂತ್ರಿ ಪನ್ನೀರ‍್ ಸೆಲ್ವಂಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಳ್ಳಲು ಇಷ್ಟವಿಲ್ಲ. ಅವರಿಗೆ ಮುಖ್ಯ ಮಂತ್ರಿ ಹುದ್ದೆಯೇ ಬೇಕು. ಯಾಕೆಂದರೆ ವಿಲೀನಗೊಂಡರೆ ಅಲ್ಲಿ ಮುಖ್ಯ ಮಂತ್ರಿ ಹುದ್ದೆಯೇ ಪ್ರಧಾನವಾಗುತ್ತದೆ. ಪ್ರಧಾನ ಕಾರ್ಯದರ್ಶಿ ಹುದ್ದೆ ಪಕ್ಷದ ನಿಯಮಾವಳಿಯ ಪ್ರಕಾರವೇ ನೇಮಕ ನಡೆಯುತ್ತಿದೆ. ಇದು ದೀರ್ಘಾವಧಿ ಪ್ರಕ್ರಿಯೆ ಈ ಕಾರಣದಿಂದಾಗಿ ಓಪಿಎಸ್ ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಇದರಿಂದಾಗಿ ವಿಲೀನ ಮಾತುಕತೆಗೆ ಅಡ್ಡಿಯಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ನಡೆದರೆ ಓಪಿಎಸ್ ಅವರು ಒಂದು ವೇಳೆ ಪಳನಿ ಸ್ವಾಮಿ ಬೆಂಬಲ ನೀಡದಿದ್ದರೂ ವೈಯಕ್ತಿಕ ವರ್ಚಸ್ಸಿನ ಮೂಲಕ ಜಯ ಗಳಿಸುತ್ತಾರೆ ಎಂದು ಓಪಿಎಸ್ ಬಣದ ಶಾಸಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.