'ಸರ್ಕಾರಿ ಸೀಟು ಬೇಕು,ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಿಲ್ಲವೇಕೆ?' : ವೈದ್ಯರ ನಡೆಗೆ ಸಿಎಂ ಅಸಮಾಧಾನ

ಶಿವಮೊಗ್ಗ, ಏ. 22: ’ಸರ್ಕಾರಿ ಮೆಡಿಕಲ್ ಕಾಲೇಜ್‌ನಲ್ಲಿ ಓದುತ್ತಾರೆ. ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಎಂದರೆ ನಿರಾಕರಿಸುತ್ತಾರೆ. ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಇದು ಎಷ್ಟರ ಮಟ್ಟಿಗೆ ಸಮಂಜಸ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೆಲ ವೈದ್ಯರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ರಾಜ್ಯ ಖಾಸಗಿ ಆಸ್ಪತ್ರೆ ವೈದ್ಯರ ಸಮಾವೇಶ ಉದ್ಘಾಟಿಸಿದ ನಂತರ ಅವರು ಮಾತನಾಡಿದರು. ’ಎಂಬಿಬಿಎಸ್ ಓದುವವರ ಮೇಲೆ ಸರ್ಕಾರ ಎಷ್ಟೊಂದು ಹಣ ಖರ್ಚು ಮಾಡುತ್ತದೆ. ಇಂತಹವರು ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಆಗಮಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಕೆಲವರು ಲಕ್ಷಾಂತರ, ಕೋಟ್ಯಾಂತರ ರೂ. ಶುಲ್ಕ ಕೊಟ್ಟು ಓದುತ್ತಾರೆ. ಒಂದು ವೇಳೆ ಅವರು ಬೇಕಾದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗಲಿ. ಆದರೆ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಓದುವವರಾದರು ಸರ್ಕಾರಿ ಆಸ್ಪತ್ರೆಗಳಿಗೆ ಬರಬೇಕಲ್ಲವೇ? ಕೆಲವರಿಗೆ ಕೆಲಸದ ಆದೇಶ ಕೊಟ್ಟರೂ ಸೇರ್ಪಡೆಯಾಗುವುದಿಲ್ಲ ಎಂದು ತೀವ್ರ ವಿಷಾದ ವ್ಯಕ್ತಪಡಿಸಿದರು.
2004 ರಿಂದ ಇಲ್ಲಿಯವರೆಗೂ 19 ಸರ್ಕಾರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಮಾಡಲಾಗಿದೆ. ಬೇರೆ ಯಾರ ಕಾಲದಲ್ಲೂ ಒಂದೇ ಒಂದು ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಆಗಲಿಲ್ಲ.
ಕೇವಲ ಶ್ರೀಮಂತರು ಮಾತ್ರ ಡಾಕ್ಟರ್ ಆಗಬಾರದು. ಬಡವರು, ಮಧ್ಯಮ ವರ್ಗದವರು, ರೈತ ಕುಟುಂಬ, ಹಳ್ಳಿಯಿಂದ ಬಂದವರು ವೈದ್ಯರಾಗಬೇಕು ಎಂಬ ಉದ್ದೇಶದಿಂದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದರು.
ಹಳ್ಳಿಗಳಿಗೆ ಹೋಗಿ: ಕೆಲ ವೈದ್ಯರು ಹಳ್ಳಿಗಳಿಗೆ ಹೋಗಿ ಸೇವೆ ಮಾಡಲು ಹಿಂಜರಿಯುತ್ತಾರೆ. ಶೇ. 65 ರಷ್ಟು ಜನರು ಹಳ್ಳಿಗಳಲ್ಲಿಯೇ ವಾಸಿಸುತ್ತಾರೆ. ಕೇವಲ ಶೇ. 35 ರಷ್ಟು ಜನ ನಗರ-ಪಟ್ಟಣಗಳಲ್ಲಿದ್ದಾರೆ. ಹಳ್ಳಿಗಳಲ್ಲಿರುವವರು ಮನುಷ್ಯರಲ್ಲವೇ? ಅವರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವವರ್ಯಾರು? ಹಳ್ಳಿ-ನಗರದಲ್ಲಿರುವವರೆಲ್ಲರೂ ಮಾನವರೆ ಎಂಬುವುದನ್ನು ಅರಿತುಕೊಳ್ಳಬೇಕು. ಹಳ್ಳಿಗರಿಗೂ ಉತ್ತಮ ವೈದ್ಯಕೀಯ ಸೇವೆ ಸಿಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಕಾಯ್ದೆ ರೂಪಿಸಿದೆ. ಆದರೆ ವೈದ್ಯರ ನಿಯಂತ್ರಣ ಮಾಡಲು, ಆತಂಕ ಹುಟ್ಟಿಸಲು ಅಲ್ಲವೆಂದರು.
ಮಾನವೀಯತೆಯಿರಲಿ: ಕೆಲ ಖಾಸಗಿ ವೈದ್ಯರು ವಾಣಿಜ್ಯ ಮನೋಭಾವವಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ಇದನ್ನು ಅಲ್ಲಗಳೆಯಲು ಕೂಡ ಆಗುವುದಿಲ್ಲ. ವೈದ್ಯರ ಬಗ್ಗೆ ಅಪಾರವಾದ ಗೌರವವಿದೆ. ರೋಗಿಗಳು ಕಾಯಿಲೆಯಿಂದ ಗುಣಮುಖರಾದಾಗ ವೈದ್ಯರನ್ನು ದೇವರ ರೀತಿಯಲ್ಲಿ ಕಾಣುತ್ತಾರೆ. ವೈದ್ಯರಲ್ಲಿ ಮಾನವೀಯತೆ, ಸಾಮಾಜಿಕ ಕಳಕಳಿಯಿರಬೇಕು ಎಂದರು.
ನಾವು (ರಾಜಕಾರಣಿ) ಎಷ್ಟು ಒಳ್ಳೆಯ ಕೆಲಸ ಮಾಡಿದರೂ ಕೆಲವರು ಬಯ್ಯುತ್ತಲೇ ಇರುತ್ತಾರೆ. ರಾಜಕಾರಣದಲ್ಲಿರುವವರೆಗೂ ಟೀಕೆಗಳು ನಿರಂತರವಾಗಿರುತ್ತವೆ. ಆದರೆ ನಿಮ್ಮ (ವೈದ್ಯರು) ಬಗ್ಗೆ ಆ ರೀತಿಯಿಲ್ಲ. ಅಪಾರ ಗೌರವವಿರುತ್ತದೆ. ಆದರೆ ಇಲ್ಲಿರುವ ಕೆಲ ದೋಷಗಳು, ನ್ಯೂನತೆಗಳನ್ನು ನೀವೇ ಸರಿಪಡಿಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ವೈದ್ಯ ಸಮೂಹಕ್ಕೆ ಕಿವಿಮಾತು ಹೇಳಿದರು.







