ಪರಿಹಾರ ವಿತರಿಸದೆ ಕಾಮಗಾರಿ: ಪ್ರತಿಭಟನೆ

ಕಾಪು,ಎ.22: ಪಾದೂರು ಕಚ್ಚಾತೈಲ ಸಂಗ್ರಹಣಾ ಘಟಕ ಐಎಸ್‌ಪಿಆರ್‌ಎಲ್ ಕಂಪೆನಿಯ ಪಾದೂರು-ತೋಕೂರು ಪೈಪ್‌ಲೈನ್‌ಗೆ ಖಾಸಗಿ ಸ್ಥಳದಲ್ಲಿ ಪರಿಹಾರ ವಿತರಿಸದೆ ಕಾಮಗಾರಿ ನಡೆಸಲಾಗುತ್ತಿರುವುದಾಗಿ ಸ್ಥಳೀಯರು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಕಾಪು ಸಮೀಪದ ಚಂದ್ರನಗರದಲ್ಲಿ ಶನಿವಾರ ನಡೆದಿದೆ.
ಪಾದೂರಿನ ಕುರಾಲ್ ಹಾಗೂ ಕಳತ್ತೂರಿನ ರೈಸ್‌ಮಿಲ್ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಸ್ಥಳೀಯ ಗ್ರಾಮಸ್ಥರು, ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಕಂಪೆನಿಯು ಜನರಿಗೆ ಯಾವುದೇ ನೋಟಿಸ್ ನೀಡದೆ ಹೆಚ್ಚುವರಿ ಜಮೀನಿನಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಸುತ್ತಿದೆ. ತಕ್ಷಣ ಅಕ್ರಮ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಒತಾಯಿಸಿದರು.
ಕುರಾಲ್ ಪ್ರದೇಶದಲ್ಲಿ ಕೆಐಎಡಿಬಿ ನಾಗಪ್ಪ ಆಚಾರ್ಯ ಅವರ 5.5 ಸೆಂಟ್ಸ್ ಜಾಗವನ್ನು ಮಾತ್ರ ಗೊತ್ತುಪಡಿಸಿ ಪರಿಹಾರವನ್ನು ನೀಡಿತ್ತು. ಇದೀಗ ಕಂಪೆನಿಯವರು 45 ಸೆಂಟ್ಸ್ ಸ್ಥಳದಲ್ಲಿ ಯಾವುದೇ ನೋಟಿಸ್ ನೀಡದೆ ಕಾಮಗಾರಿ ಮಾಡುತಿದ್ದಾರೆ. ರಾಮಕೃಷ್ಣ ತಂತ್ರಿಯವರ 50 ಸೆಂಟ್ಸ್ ಸ್ಥಳಕ್ಕೆ ನೋಟಿಸ್ 70 ಸೆಂಟ್ಸ್ ಜಮೀನಿನಲ್ಲಿ ಅಕ್ರಮವಾಗಿ ಕಾಮಗಾರಿ ಮಾಡುತ್ತಿದ್ದಾರೆ. ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಬೇಕು ಇಲ್ಲವಾದಲ್ಲಿ ಈ ಪ್ರದೇಶಗಳಲ್ಲಿ ಪೈಪುಲೈನ್ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಪಾದೂರು ಕಳತ್ತೂರು ಜನಜಾಗೃತಿ ಸಮಿತಿ ಮುಖ್ಯ ಸಲಹೆಗಾರ ಶಿವರಾಮ ಶೆಟ್ಟಿ ಎಚ್ಚರಿಕೆ ನೀಡಿದರು.
ಕಳೆದ ಅಕ್ಟೋಬರ್‌ನಲ್ಲಿ ರೈಸ್‌ಮಿಲ್ ಬಳಿ ಬಂಡೆ ಸ್ಫೋಟದಿಂದ 32 ಮನೆಗಳಿಗೆ ಹಾನಿಯಾಗಿದ್ದು, ಈವರೆಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಕೃಷಿ ಪ್ರದೇಶದಲ್ಲಿ ಪೈಪುಲೈನ್ ಕಾಮಗಾರಿಯಿಂದ ಮಳೆ ನೀರು ಹರಿಯುವ ತೊಡುಗಳು ಮುಚ್ಚಿ ಹೋಗಿವೆ. ಮಳೆಗಾಲ ಆರಂಭಕ್ಕೆ ಮೊದಲು ಅದನ್ನು ಸರಿಪಡಿಸದಿದ್ದಲ್ಲಿ ಕೃತಕ ನೆರೆ ಉಂಟಾಗಿ ಜನ ಹಾಗೂ ಕೃಷಿ ಪ್ರದೇಶಕ್ಕೆ ಹಾನಿಯಾಗಲಿದೆ ಎಂದು ಅವರು ಹೇಳಿದರು.
ಗ್ರಾಮಸ್ಥರು ಅಕ್ರಮ ಕಾಮಗಾರಿ ಬಗ್ಗೆ ಗ್ರಾಮ ಪಂಚಾಯ್ತಿಗೆ ಮನವಿ ನೀಡಿದ್ದಾರೆ. ಇತ್ತೀಚೆಗೆ ಕೆಐಎಡಿಬಿ ಸರ್ವೇ ಸಂದರ್ಭ ಗಡಿ ಗುರುತು ಮಾಡಲು ಗ್ರಾಮ ಲೆಕ್ಕಿಗರನ್ನು ಕಳುಹಿಸಿಕೊಡುವಂತೆ ತಹಶೀಲ್ದಾರ್ ಅವರಿಗೆ ವಿನಂತಿಸಿದರೂ ಅವರು ನಮ್ಮೊಂದಿಗೆ ಉದ್ದಟತನದಿಂದ ವರ್ತಿಸಿದ್ದಾರೆ. ನಮಗೆ ಸಾಕಷ್ಟು ಕೆಲಸಗಳಿವೆ. ನಿಮ್ಮ ಸಮಸ್ಯೆಯನ್ನು ನೀವೆ ನೋಡಿಕೊಳ್ಳಿ ಎಂದು ತಹಶೀಲ್ದಾರ್ ದುರ್ವರ್ತನೆ ತೋರಿದ್ದಾರೆ ಎಂದು ಮಜೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂದೀಪ್ ರಾವ್ ಆರೋಪಿಸಿದರು.
ಉಪಾಧ್ಯಕ್ಷೆ ಸಹನ ತಂತ್ರಿ, ಗ್ರಾಮಸ್ಥರಾದ ನಿತ್ಯಾನಂದ ಶೆಟ್ಟಿ, ಕೃಷ್ಣ ರಾವ್, ಶ್ರೀನಿವಾಸ ಐತಾಳ್ ದಿವಾಕರ ಶೆಟ್ಟಿ ಇದ್ದರು.







