35 ಕಿ.ಗ್ರಾಂ. ಅಕ್ಕಿ ಚೀಲವನ್ನು ಫಲಾನುಭವಿ ಮನೆಗೆ ಸ್ವಯಂ ತಲುಪಿಸಿದ ಜಾರ್ಖಂಡ್ ಮುಖ್ಯಮಂತ್ರಿ

ಫೋಟೊ : ಹಿಂದುಸ್ತಾನ್ ಟೈಮ್ಸ್
ರಾಂಚಿ, ಎ.22: ಮುಖ್ಯಮಂತ್ರಿ ರಘುವರ್ ದಾಸ್ 35 ಕಿಲೋ ಅಕ್ಕಿಯನ್ನು ತನ್ನ ಮನೆಗೇ ತಂದು ತಲುಪಿಸಿದಾಗ ಜಾರ್ಖಂಡ್ ರಾಜ್ಯದ ಸುಂದರಿನ್ ಪಹಾರಿನ್ ಎಂಬ ಮಹಿಳೆಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಅಕ್ಕಿ ಮೂಟೆಯನ್ನು ಮನೆಗೆ ತಲುಪಿಸಿದ ಮುಖ್ಯಮಂತ್ರಿ ಒಂದು ಲೋಟ ನೀರು ಕೇಳಿ ಕುಡಿದಾಗ ಆಕೆ ಇನ್ನಷ್ಟು ಕಕ್ಕಾಬಿಕ್ಕಿಯಾದಳು.
ಜಾರ್ಖಂಡ್ ಸರಕಾರ ‘ನಿರ್ದಿಷ್ಟ ದುರ್ಬಲ ಬುಡಕಟ್ಟು ತಂಡ’ ದವರಿಗಾಗಿ ರಾಜ್ಯದಲ್ಲಿ ನೂತನವಾಗಿ ಜಾರಿಗೆ ತಂದಿರುವ ‘ಮನೆ ಬಾಗಿಲಿಗೆ ಆಹಾರ ’ ಯೋಜನೆಯ ಪ್ರಪ್ರಥಮ ಫಲಾನುಭವಿಯಾಗಿದ್ದಳು ಸುಂದರಿನ್. ಈ ಯೋಜನೆಗೆ ಪಾಕುರ್ ಜಿಲ್ಲೆಯ ಸೂರಜ್ಬೆರಾ ಗ್ರಾಮದಲ್ಲಿ ಚಾಲನೆ ನೀಡಿದ್ದ ಮುಖ್ಯಮಂತ್ರಿ ಬಳಿಕ ಅಕ್ಕಿಯ ಚೀಲವನ್ನು ಸುಂದರಿನ್ ಮನೆಗೆ ಸ್ವಯಂ ತಲುಪಿಸಿದ್ದರು. ಅಲ್ಲದೆ, ಇನ್ನುಮುಂದೆ ಪ್ರತೀ ತಿಂಗಳೂ ಆಹಾರದ ಪೊಟ್ಟಣ ಮನೆಗೇ ಬರಲಿದೆ ಎಂದು ತಿಳಿಸಿದರು. ಸಂತಲ್ ಪರಗಣ ಪ್ರದೇಶದಲ್ಲಿರುವ ಪಹಾರಿಯಾ ಬುಡಕಟ್ಟಿಗೆ ಸೇರಿದ 24000ಕ್ಕೂ ಹೆಚ್ಚಿನ ಕುಟುಂಬಗಳು ಈ ಯೋಜನೆಗೆ ಸೇರ್ಪಡೆಗೊಳ್ಳಲಿವೆ ಎಂದೂ ಮುಖ್ಯಮಂತ್ರಿ ತಿಳಿಸಿದರು.
ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುವ 70000 ದುರ್ಬಲ ಬುಡಕಟ್ಟು ಕುಟುಂಬಗಳಿಗೆ ಮನೆಬಾಗಿಲಲ್ಲೇ ಆಹಾರ ಒದಗಿಸುವ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ರಾಜ್ಯ ಸರಕಾರ ಎಪ್ರಿಲ್ 3ರಂದು ಆರಂಭಿಸಿತ್ತು. ಓರ್ವ ವಿಶೇಷ ಸಂದೇಶವಾಹಕನ ಮೂಲಕ ಫಲಾನುಭವಿಗಳ ಮನೆಬಾಗಿಲಿಗೇ ತಲುಪಿಸಲಾಗುತ್ತದೆ. ರಾಜ್ಯದ ಒಟ್ಟು ಜನಸಂಖ್ಯೆ 3.29 ಕೋಟಿಯಾಗಿದ್ದು ಇದರಲ್ಲಿ 2.63 ಕೋಟಿಗೂ ಹೆಚ್ಚು ಮಂದಿಯನ್ನು ಆಹಾರ ಭದ್ರತಾ ಕಾಯ್ದೆಯಡಿ ಸೇರಿಸಲಾಗಿದೆ.





