ತೆಂಗಿಗೆ ಮತ್ತೆ ವೃಕ್ಷದ ಸ್ಥಾನಮಾನ

ಪಣಜಿ, ಎ.22: ತೆಂಗಿಗೆ ಮತ್ತೆ ವೃಕ್ಷದ ಮಾನ್ಯತೆ ನೀಡಲು ಸರಕಾರ ನಿರ್ಧರಿಸಿದೆ ಎಂದು ಗೋವಾದ ಕೃಷಿ ಸಚಿವ ವಿಜಯ್ ಸರ್ದೇಸಾಯಿ ತಿಳಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ತೆಂಗಿನ ಮರಕ್ಕೆ ವೃಕ್ಷದ ಸ್ಥಾನಮಾನ ನಿರಾಕರಿಸಿದ್ದ- ಗೋವಾ ದಾಮನ್ ಮತ್ತು ದಿಯು ವೃಕ್ಷ ಸಂರಕ್ಷಣೆ ಕಾಯ್ದೆ 1984ಕ್ಕೆ ತಿದ್ದುಪಡಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ತೆಂಗಿನ ಮರಗಳನ್ನು ಕಡಿಯಲು ಅನುಮತಿ ಕೋರಿ ರಾಜ್ಯದ ಅರಣ್ಯ ಇಲಾಖೆಗೆ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಹಾಲಿ ಸರಕಾರ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಕರಾವಳಿ ರಾಜ್ಯವಾಗಿರುವ ಗೋವಾದ ವೈಶಿಷ್ಟದ ಪ್ರತೀಕವಾಗಿರುವ ತೆಂಗಿನ ಮರದ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು . ಮುಂದಿನ ದಿನದಲ್ಲಿ ತೆಂಗಿನಮರವನ್ನು ರಾಜ್ಯದ ವೃಕ್ಷ ಎಂದು ಘೋಷಿಸಲಾಗುವುದು ಎಂದವರು ತಿಳಿಸಿದ್ದಾರೆ.
Next Story





