ಹೆಣ್ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ : ಮುಸ್ಲಿಂ ಸಮುದಾಯಕ್ಕೆ ರಾಜ್ಯಪಾಲರ ಕರೆ
‘ಬನಾತ್’ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ

ಮಂಗಳೂರು, ಎ.22: ಹೆಣ್ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಉಳ್ಳಾಲ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ 35ನೆ ವಾರ್ಷಿಕ ಸಂಭ್ರಮ ಪ್ರಯುಕ್ತ ಉಳ್ಳಾಲದ ಮದನಿ ಗ್ರೌಂಡ್‌ನಲ್ಲಿ ಶನಿವಾರ ನಡೆದ ‘ಬನಾತ್’ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ, ಹಝ್ರತ್ ಮದನಿ ಇಲ್ಮ್ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಾಧಕರಿಗೆ ಮದನಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರಾಗಿರುವ ಕ್ರೈಸ್ತ ಸಮುದಾಯವು ತನ್ನ ಸಮುದಾಯದಲ್ಲಿನ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಂತೆ ನೀವು ಕೂಡ ಹೆಣ್ಮಕ್ಕಳ ಶಿಕ್ಷಣದ ಮುತುವರ್ಜಿ ವಹಿಸಿ ಆದ್ಯತೆ ನೆಲೆಯಲ್ಲಿ ಕಾರ್ಯ ನಿರ್ವಹಿಸಬೇಕು. ಹೆಣ್ಣು ಅಭಿವೃದ್ಧಿಯಾದರೆ, ಸಮುದಾಯ, ಸಮಾಜ, ರಾಜ್ಯ ಹಾಗೂ ದೇಶ ಅಭಿವೃದ್ಧಿಗೊಂಡಂತೆ ಎಂದು ವಜುಭಾಯಿ ರೂಢಾಬಾಯಿ ವಾಲಾ ಹೇಳಿದರು.
ಹೆಣ್ಣು ಅಬಲೆ, ದುರ್ಬಲಳು ಅಥವಾ ಬುದ್ಧಿಹೀನಳು ಎಂಬ ಭಾವನೆ ಸಲ್ಲದು. ಇಂತಹ ಕೀಳು ಭಾವನೆಯಿಂದ ಹೆಣ್ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುವುದು ಸರಿಯಲ್ಲ.ಹೆಣ್ಣು ಇಂದಿಗೂ ಬುದ್ಧಿಯಲ್ಲಿ ಪರಿಪಕ್ವವಾಗಿದ್ದಾಳೆ, ಇಂದು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದರಲ್ಲಿ ಮಹಿಳೆಯರೂ ಇದ್ದಾರೆ. ರಾಷ್ಟ್ರಪತಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೂ ದೇಶ, ರಾಜ್ಯವನ್ನು ಆಳಿದ ಕೀರ್ತಿ ಮಹಿಳೆಯರಿಗೆ ಸಲ್ಲುತ್ತದೆ.
ಮಂಗಳೂರಿನ ಪ್ರಥಮ ಪ್ರಜೆಯೂ ಮಹಿಳೆ ಆಗಿದ್ದಾರೆ. ಈ ಮೂಲಕ ಮಹಿಳೆಯು ಎಲ್ಲ ಕ್ಷೇತ್ರಗಳನ್ನು ನಿಭಾಯಿಸಲು ಸಮರ್ಥಳು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಪೊಲೀಸ್ ಅಧಿಕಾರಿ, ರಾಜಕಾಣಿ, ಮುಖ್ಯಮಂತ್ರಿ ಅಥವಾ ಮಿಲಿಟರಿ ಅಧಿಕಾರಿ ಹೀಗೆ ವಿವಿಧ ಸ್ತರಗಳಲ್ಲಿನ ಅಧಿಕಾರಿಯನ್ನು ನಿಯಂತ್ರಿಸುವವಳು ಪತ್ನಿ ಎಂಬ ಮಹಿಳೆಯೇ ಆಗಿದ್ದಾಳೆ. ಆದ್ದರಿಂದ ಮಹಿಳೆಯ ಅವಮಾನದಿಂದ ಪರಿವಾರ ಸುಖವಾಗಿರದು ಎಂದು ರಾಜ್ಯಪಾಲರು ಹೇಳಿದರು.
ಸಮಾಜದಲ್ಲಿ ಹೆಣ್ಣಿನ ಶಿಕ್ಷಣಕ್ಕೆ ಮುಕ್ತ ಅವಕಾಶ ಸಿಕ್ಕಿಲ್ಲ. ಹುಡುಗನ ಶಿಕ್ಷಣದ ಕಡೆಗೆ ಗಮನ ಹರಿಸುವ ಪೋಷಕರು ಹೆಣ್ಣಿನ ಶಿಕ್ಷಣದ ವಿಷಯದಲ್ಲಿ ಕಾಳಜಿ ವಹಿಸಿಲ್ಲ. ಗಂಡು ಓದಿದರೆ ಆತ ತನ್ನ ವ್ಯವಹಾರಕಷ್ಟೇ ಸೀಮಿತಗೊಳ್ಳಬಹುದು. ಆದರೆ ಹೆಣ್ಣನ್ನು ಓದಿಸುವುದರಿಂದ ಇಡೀ ಪರಿವಾರ, ಸಮಾಜ ಅಭಿವೃದ್ದಿ ಹೊಂದಬಹುದು. ಆದ್ದರಿಂದ ಪ್ರತಿ ಮಗು ತನ್ನ ತಂದೆಯಲ್ಲಿ ತನ್ನನ್ನು ಓದಿಸುವಂತೆ ಧೈರ್ಯದಿಂದ ಕೇಳುವಂತಾಗಬೇಕು ಎಂದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ 35ನೆ ವಾರ್ಷಿಕ ಸಂಭ್ರಮಕ್ಕಿಂತ ಟ್ರಸ್ಟ್‌ನವರು ಹೆಣ್ಮಕ್ಕಳ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿರುವುದು ವಿಶೇಷವಾಗಿದೆ. ವಾರ್ಷಿಕ ಸಂಭ್ರಮಗಳು ವರ್ಷಂಪ್ರತಿ ಆಚರಣೆಯಾಗುತ್ತಿರುತ್ತವೆ. ಆದರೆ, ಇದೇ ಸಂಭ್ರಮದಲ್ಲಿ ‘ಬನಾತ್’ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ಟ್ರಸ್ಟ್‌ನವರ ಹೆಣ್ಮಕ್ಕಳ ವಿದ್ಯಾಭ್ಯಾಸದ ಕಾಳಿಜಿಯನ್ನು ತೋರಿಸುತ್ತದೆ ಎಂದು ಟ್ರಸ್ಟ್‌ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಸಯ್ಯದ್ ಮದನಿ ಅವರು ಮಾಡಿರುವ ಸಮಾಜ ಸೇವೆ ಮತ್ತು ಮಾನವೀಯ ಕೆಲಸಗಳಿಂದಲೇ ಅವರಿಂದ ಗುರುತಿಸಲ್ಪಟ್ಟಿದ್ದಾರೆ. ದಕ್ಷಿಣ ಭಾರತದ ಜನ ಸಮೂಹದಲ್ಲಿ ಇವರು ಹೆಸರು ಗಳಿಸಿಕೊಂಡಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಮಾತನಾಡಿ, ಸಯ್ಯದ್ ಮದನಿ ಅವರ ಹೆಸರಲ್ಲಿ ಶೈಕ್ಷಣಿಕ ಚಳುವಳಿಯೇ ನಡೆದಿದ್ದು, ಇದೀಗ ಹೆಣ್ಮಕ್ಕಳಿಗಾಗಿ ಮಹಿಳಾ ಕಾಲೇಜು ಸ್ಥಾಪಿಸಲು ಹೊರಟಿರುವುದು ಶ್ಲಾಘನೀಯ ಎಂದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ, ಸೈಯ್ಯದ್ ಮದನಿ ದರ್ಗಾ ಆಡಳಿತ ಮಂಡಳಿ ಟ್ರಸ್ಟ್ ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಕಾರ್ಯಕ್ರಮ ನಿರ್ವಹಿಸುತ್ತಾ ಬಂದಿದೆ. ಇದೀಗ ಹೆಣ್ಮಕ್ಕಳ ಕಾಲೇಜನ್ನು ಸ್ಥಾಪಿಸಿ ಶಿಕ್ಷಣ ನೀಡುವ ಕೆಲಸಕ್ಕೆ ಹಾಕಿದ್ದು, ಯಶಸ್ವಿಯಾಗಿ ಮುಂದೆ ಸಾಗಲಿ ಎಂದು ಹಾರೈಸಿದರು.
ಇದೇಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿಸಾಧನೆ ಗೈದಸಾಧಕರಿಗೆ ರಾಜ್ಯಪಾಲರು ಮದನಿ ಪ್ರಶಸ್ತಿ ಪ್ರದಾನಿಸಿ, ಹಝ್ರತ್ ಮದನಿ ಇಲ್ಮ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಮತ್ತು ಉಳ್ಳಾಲ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು.
ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಖಾನ್, ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞಿ, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಕೆ.ಎಸ್.ಮುಹಮ್ಮದ್ ಮಸೂದ್, ಶಾಸಕ ಮೊದಿನ್ ಬಾವಾ, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿ ಮೋನು, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರ್ರಾಹೀಂ,ಎಸ್.ಎಂ.ರಶೀದ್ ಹಾಜಿ, ಎಚ್.ಎನ್. ಹಮೀದ್, ಅಬ್ದುಲ್ ರವೂಫ್ ಪುತ್ತಿಗೆ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ, ಕೆಎಸ್‌ಎ ಅಮೆಕೋ ಇದರ ಆಸಿಫ್, ಖತಾರ್ ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಅಬ್ದುಲ್ಲಾ ಮೋನು ಮೊದಿನ್ ಬಾವ, ಕೆಎಸ್‌ಎ ರಿಯಲ್‌ಟೆಕ್‌ನ ಇಸ್ಮಾಯೀಲ್, ಅಲ್‌ಬದ್ರು ಗ್ರೂಪ್‌ನ ಅಬ್ದುಲ್ಲತೀಫ್, ಕೆಎಸ್‌ಎ ಪವಿತ್ರ ಗ್ರೂಪ್‌ನ ಅಝೀಝ್, ದ.ಕ. ಜಿಲ್ಲಾ ಮುಸ್ಲಿಂ ಅಸೋಸಿಯೇಶನ್‌ನ ಉಪಾಧ್ಯಕ್ಷ ಮನ್ಸೂರ್, ಉಳ್ಳಾಲ ಎಸ್‌ಎಂಸಿಟಿಯ ಫೌಂಡರ್ ಟ್ರಸ್ಟಿ ಹಾಗೂ ನ್ಯಾಯವಾದಿ ಎ.ಎ.ಖಾದರ್, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಎಂಎಎ ಉಳ್ಳಾಲ ಇದರ ಎ.ಇಬ್ರಾಹೀಂ ಖಾಸಿಂ ಮೊದಲಾದವರು ಉಪಸ್ಥಿತರಿದ್ದರು.
ದರ್ಗಾಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಸ್ವಾಗತಿಸಿದರು. ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು. ದರ್ಗಾ ಆಡಳಿತ ಪ್ರ.ಕಾರ್ಯದಶಿ ಅಫ್ತಾರ್ ಹುಸೈನ್ ವಂದಿಸಿದರು.







