ಮೀನುಗಳ ಸಂತತಿ ವಿನಾಶದ ಭೀತಿಯಲ್ಲಿ ಮೀನುಗಾರರು
ದಕ್ಕೆ: ಪರ್ಸಿನ್ ಬೋಟ್‌ಗಳಿಗೆ ಮೀನುಗಾರಿಕೆಗೆ ಅನುಮತಿ

ರಾಜ್ಯದ ಮಹಾ ನಗರಗಳಲ್ಲಿ ಒಂದಾಗಿರುವ ಮಂಗಳೂರು, ಕಡಲು ಮೀನುಗಾರಿಕೆಗೆ ಹೆಸರಾಗಿರುವ ಪ್ರಮುಖ ಬಂದರು. ಬೃಹತ್ ಕೈಗಾರಿಕೋದ್ಯಮಕ್ಕೆ ಹೆಸರಾಗಿರುವ ಮಂಗಳೂರಿ ನಲ್ಲಿ ಮೀನುಗಾರಿಕೆ ಅತೀ ದೊಡ್ಡ ಉದ್ಯಮ ವಾಗಿ ಗುರುತಿಸಿಕೊಂಡಿದೆ. ಇದೀಗ ಈ ಮೀನುಗಾರಿಕೆ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಆಧುನಿಕ ಬೋಟ್‌ಗಳ ಹಾವಳಿಗೆ ಬೆದರಿ ನಿಂತಿದೆ. ಈ ಬೋಟುಗಳು ನಡೆಸುವ ಮೀನುಗಾರಿಕೆ ವಿಧಾನ ದಿಂದಾಗಿ ಭವಿಷ್ಯದಲ್ಲಿ ಕಡಲಾಳದಲ್ಲಿರುವ ವೈವಿಧ್ಯಮಯ ಮೀನುಗಳ ಸಂಕುಲವೇ ನಾಶವಾಗುವ ಭೀತಿಯಿಂದಾಗಿ ಈ ಬೋಟುಗಳನ್ನು ಕಡಲಿಗಿಳಿಸುವುದನ್ನು ಮೀನುಗಾರರು ವಿರೋಧಿಸುತ್ತಿದ್ದಾರೆ.
ಕರಾವಳಿ ಮೀನುಗಾರಿಕೆ ಉದ್ಯಮವನ್ನು ಅವಲಂಬಿಸಿ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಲಕ್ಷಾಂತರ ಮಂದಿ ಬೋಟ್‌ಗಳನ್ನು ನಿರ್ಮಿಸುವ ಕಾರ್ಖಾನೆ, ಬಲೆಗಳನ್ನು ಹೆಣೆಯುವ ಕಸುಬು ಗಾರಿಕೆ, ಮೀನುಗಳ ರಪ್ತು ಮೊದ ಲಾದ ಲೆಕ್ಕವಿಲ್ಲದಷ್ಟು ಉಪ ಉದ್ಯಮಗಳನ್ನು ನಡೆಸುತ್ತಿದ್ದಾರೆ. ದಿನ ವೊಂದಕ್ಕೆ ಕೋಟ್ಯಂತರ ರೂ. ವಹಿವಾಟು ಹೊಂದಿರುವ ಮೀನುಗಾರಿಕೆ ಉದ್ಯಮದ ಆಧಾರಸ್ತಂಭದಂತಿರುವ ಲಕ್ಷಾಂತರ ಮಂದಿ ಮೀನು ಗಾರರು ಕಡಲಾಳದ ಮೀನುಗಾರಿಕೆಯ ಕುರಿತಂತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮೀನು ಹಿಡಿಯಲು ನಾನಾ ಬಗೆಯ ಬೋಟ್‌ಗಳು: ಮೀನುಗಾರರು ಸಮುದ್ರದಲ್ಲಿ ಮೀನು ಹಿಡಿಯಲು ವಿವಿಧ ಬಗೆಯ ಆಧುನಿಕ ಬೋಟ್‌ಗಳನ್ನು ಬಳಸುತ್ತಿದ್ದು, ಅವುಗಳನ್ನು ಡೀಪ್ ಫಿಶಿಂಗ್, ಮಿಡ್ಲ್ ಡೀಪ್ ಫಿಶಿಂಗ್, ಕೆರೆ ಫಿಶಿಂಗ್ ಹಾಗೂ ಫರ್ಸಿನ್ ಬೋಟಿಂಗ್ ಎಂದು ನಾಲ್ಕು ವಿಧಗಳನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ ಡೀಪ್ ಫಿಶಿಂಗ್ ಬೋಟುಗಳು ಒಮ್ಮೆ ಕಡಲಿಗಿಳಿದರೆ ಸುಮಾರು 20 ದಿನಗಳ ಕಾಲ ಸಮುದ್ರದಲ್ಲೇ ಲಂಗರು ಹಾಕಿ, ಸುಮಾರು 200 ಮೀ. ಆಳದಲ್ಲಿ ಮೀನುಗಳನ್ನು ಹಿಡಿಯಲಾಗುತ್ತದೆ.
ಮಿಡ್ಲ್ ಡೀಪ್ ಫಿಶಿಂಗ್ ಬೋಟುಗಳು ಹೆಚ್ಚೆಂದರೆ ಒಂದು ವಾರಗಳ ಕಾಲ ಸಮುದ್ರದ 100 ಮೀ. ಆಳದಲ್ಲಿ ಮೀನು ಹಿಡಿಯುವ ಕಾರ್ಯಾಚರಣೆ ನಡೆಸುತ್ತವೆ.ಕೆರೆ ಫಿಶಿಂಗ್ ಬೋಟುಗಳ ಮೂಲಕ ಮೀನುಗಾರರು ಕೇವಲ ಒಂದು ದಿನ ಮಾತ್ರ ಅಂದರೆ, ಬೆಳಗಿನ ಜಾವ ಸಮುದ್ರಕ್ಕಿಳಿದು ಸಂಜೆಯಾಗುತ್ತಲೇ ಎಷ್ಟು ಸಾಧ್ಯವೋ ಅಷ್ಟು ಮೀನುಗಳನ್ನು ಹಿಡಿದು ದಡ ಸೇರು್ತಾರೆ.
ಇನ್ನು ಪರ್ಸಿನ್ ಬೋಟ್‌ಗಳು ಒಂದು ತಿಂಗಳುಗಳ ಕಾಲ ಸಮುದ್ರದಲ್ಲಿ ಮೀನು ಹಿಡಿಯಲು ಬಳಸುವ ಬೋಟ್‌ಗಳಾಗಿದ್ದು, ಈ ವಿಧಾನದಲ್ಲಿ ಮೀನುಗಾರರು ರಾತ್ರಿ ವೇಳೆ ಆಳ ಸಮುದ್ರದಲ್ಲಿ ಪ್ರಖರ ಬೆಳಕನ್ನು ಹಾಯಿಸಿ, ಈ ಬೆಳಕಿಗೆ ಆಕರ್ಷಿತವಾಗಿ ಬರುವ ಮೀನುಗಳ ಗುಂಪನ್ನು ಬಲೆಗಳ ಸಹಾಯದಿಂದ ಹಿಡಿಯಲಾಗುತ್ತದೆ.
ನಾಲ್ಕು ಬೋಟಿಂಗ್ ವಿಧಾನಗಳ ಪೈಕಿ ಪರ್ಸಿನ್ ಬೋಟುಗಳ ಫಿಶಿಂಗ್ ಕಾರ್ಯಾಚರಣೆಗೆ ಕಡಲ ತೀರದ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪರ್ಸಿನ್ ಬೋಟ್‌ಗಳು ಒಮ್ಮೆ ಕಡಲಿಗಿಳಿದರೆ ತಿಂಗಳು ಗಟ್ಟಲೆ ಮೀನುಗಾರಿಕೆ ನಡೆಸುತ್ತವೆ. ಈ ವೇಳೆ ಸಮುದ್ರ ತಳದಲ್ಲಿರುವ ವೈವಿಧ್ಯಮಯ ಮೀನುಗಳೊಂದಿಗೆ ಅವುಗಳ ಮೊಟ್ಟೆ, ಮರಿ ಮೀನುಗಳನ್ನೂ ಹೆಕ್ಕಿ ತೆಗೆಯುವುದರಿಂದ ಕಡಲಾಳದಲ್ಲಿ ಮೀನುಗಳ ಸಂತಾನೋತ್ಪತ್ತಿಗೆ ಈ ಬೋಟ್‌ಗಳು ಮಾರಕವಾಗಿ ಪರಿಣಮಿಸುತ್ತಿವೆ. ಈ ಕಾರಣಕ್ಕೆ ಮೀನುಗಾರರು ಪರ್ಸಿನ್ ಬೋಟಿಂಗ್ ವಿಧಾನದ ಮೂಲಕ ಮೀನುಗಾರಿಕೆಗೆ ಅವಾಶ ನೀಡಬಾರದೆಂಬ ಕೂಗೆಬ್ಬಿಸಿದ್ದಾರೆ.ಪರ್ಸಿನ್ ಬೋಟ್‌ಗಳಿಂದ ಸಮುದ್ರ ಜೀವಿಗಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಸರಕಾರ ಸೂಕ್ತ ಅಧ್ಯಯನ ಕೈಗೊಳ್ಳಬೇಕಿದೆ. ಈ ಮೂಲಕ ಸಮುದ್ರ ಜೀವಿಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.
ಪರ್ಸಿನ್ ಬೋಟಿಂಗ್ ಮೀನುಗಾರಿಕೆಯಿಂದಾಗಿ ಇತರ ಮೀನುಗಾರರಿಗೆ ತೊಂದರೆ ಯಾಗಿದೆ. ಇತರ ಬೋಟಿಂಗ್ ಮೀನುಗಾರರಿಗೆ ಮೀನುಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತಿವೆ. ಇದರಿಂದ ಮೀನುಗಾರರ ಹಣ, ಸಮಯ ವ್ಯರ್ಥವಾಗುತ್ತಿದೆ. ಮುಖ್ಯವಾಗಿ ಪರ್ಸಿನ್ ಬೋಟಿಂಗ್ ಫಿಶಿಂಗ್‌ನಿಂದಾಗಿ ಅಪರೂಪದ ಮೀನುಗಳು ಅಳಿವಿನಂಚಿಗೆ ಸರಿಯುವ ಭೀತಿ ಎದುರಾಗಿದೆ. ಬಂದರು ಅಧಿಕಾರಿಗಳು ಒಮ್ಮೆ ಈ ಬೋಟ್‌ಗಳ ಮೀನುಗಾರಿಕೆಯನ್ನು ನಿಷೇಧಿಸಿದ್ದರು. ಈಗ ಪುನಃ ಅನುಮತಿ ನೀಡಿರುವುದರಿಂದ ಸಣ್ಣ ಮೀನು ಗಾರರಿಗೆ ದೊಡ್ಡ ಹೊಡೆತ ಬೀಳುವಂತಾಗಿದೆ.
ಶರೀಫ್, ಕೆರೆ ಫಿಶಿಂಗ್ ಬೋಟ್‌ನ ಮಾಲಕ
ಅನುಮತಿ ನಿಷೇಧಿಸಲಾಗಿತ್ತು!
ಪರ್ಸಿನ್ ಬೋಟ್‌ಗಳನ್ನು ಬಳಸಿ ಮೀನು ಹಿಡಿಯುವ ವಿಧಾನ ಮೀನು ಸಂತತಿಗಳಿಗೆ ಮಾರಕವಾಗುತ್ತಿರುವುದು ಹಾಗೂ ಇತರ ಮೀನುಗಾರರಿಗೆ ಸಿಗುವ ಮೀನುಗಳ ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನು ಗಮನಿಸಿದ ತಜ್ಞ ಮೀನುಗಾರರು ಹಾಗೂ ಮೀನುಗಾರರ ಪರ ಹೋರಾಟಗಾರರು ಈ ಬೋಟ್‌ಗಳನ್ನು ಬಳಸಿ ಮೀನು ಹಿಡಿಯಲು ಅನುಮತಿ ನೀಡಬಾರದೆಂದು ಸರಕಾರಕ್ಕೆ ಮನವಿ ಮಾಡಿದ್ದರು. ಪರಿಣಾಮ ಕಳೆದ ಎರಡು ತಿಂಗಳುಗಳ ಹಿಂದೆ ಪರ್ಸಿನ್ ಬೋಟ್ ಫಿಶಿಂಗ್‌ಗೆ ಸರಕಾರ ನಿಷೇಧ ಹೇರಿತ್ತು.
ಮೀನುಗಳ ಸಂತತಿಗೆ ಮರಣ ಶಾಸನ ಬರೆದ ಸರಕಾರ ಪರ್ಸಿನ್ ಬೋಟ್‌ಗಳ ಮಾಲಕರ ಲಾಬಿಗೆ ಮಣಿದಿದೆಯೇನೋ ಎಂಬ ಸಂಶಯಕ್ಕೆ ಎಡೆಯಾಗುವಂತೆ, ಇತ್ತೀಚೆಗೆ ಈ ಬೋಟ್‌ಗಳ ಮೀನುಗಾರಿಕೆಗೆ ಅನುಮತಿ ನೀಡಿದೆ. ಇದು ಇಲ್ಲಿನ ಹಿರಿಯ, ತಜ್ಞ ಮೀನುಗಾರರ ನಿದ್ದೆಗೆಡಿಸಿದೆ. ಈ ಬೋಟ್‌ಗಳ ಕಾರ್ಯಾಚರಣೆಯಿಂದಾಗಿ ಕಡಲಾಳ ದಲ್ಲಿರುವ ಬಗೆಬಗೆಯ ಮೀನುಗಳೂ ಸೇರಿದಂತೆ ವೈವಿಧ್ಯಮಯ ಸಮುದ್ರ ಜೀವಿಗಳ ಸಂತತಿ ವಿನಾಶದ ಅಂಚಿಗೆ ತಲುಪಲಿದೆ ಎಂಬ ವಿಷಾದದ ಧ್ವನಿ ಕಡಲ ಕಿನಾರೆಯಿಂದ ಕೇಳಿ ಬರುತ್ತಿದೆ.







