ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಮುಂದಿನ ಗುರಿ : ಅನಂತ್ ಕುಮಾರ್

ಮಂಗಳೂರು,ಎ.22:ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ರಚನೆ ಮುಂದಿನ ಗುರಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಎಚ್.ಎನ್.ಅನಂತ್ ಕುಮಾರ್ ತಿಳಿಸಿದ್ದಾರೆ.ಜಿಲ್ಲಾ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿ ಅವರು ಮಾತನಾಡುತ್ತಿದ್ದರು.
ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಅಧಿಕಾರದಲ್ಲಿವೆ.ದೇಶಾದ್ಯಂತ ಬಿಜೆಪಿ 11 ಕೋಟಿ ಸದಸ್ಯರನ್ನು ಹೊಂದಿದೆ. ಕರ್ನಾಟಕದಲ್ಲೂ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಪಕ್ಷ ಮುಂದಿನ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನಗಳಿಸಲು ಪಕ್ಷವನ್ನು ಸಂಘಟಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ದ.ಕ ಜಿಲ್ಲೆಯಲ್ಲೂ ಕಾಂಗ್ರೆಸ್ ದುರ್ಬಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಂಗ್ರೆಸ್ ದುರ್ಬಲವಾಗುತ್ತಿದೆ.ಆಸ್ಕರ್ ಫೆರ್ನಾಂಡೀಸ್ ಹಿಂದಕ್ಕೆ ಸರಿದಿದ್ದಾರೆ.ವೀರಪ್ಪ ಮೊಯ್ಲಿ ಜಿಲ್ಲೆಯಿಂದಲೇ ಪಲಾಯನ ಮಾಡಿದ್ದಾರೆ.ಜನಾರ್ದನ ಪೂಜಾರಿ ಭಿನ್ನಮತ ವ್ಯಕ್ತ ಪಡಿಸುತ್ತಲೆ ಇದ್ದಾರೆ.ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಿಸಲಿದೆ ಎಂದು ಅನಂತ್‌ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ,ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಗಣೇಶ್ ಕಾರ್ನಿಕ್ ಮೊದಲಾದವರು ಉಪಸ್ಥಿತರಿದ್ದರು.







