ಅಮಾಸೆಬೈಲು ಸಂಪೂರ್ಣ ಸೋಲಾರ್ ಗ್ರಾಮ; 27ಕ್ಕೆ ಘೋಷಣೆ

ಉಡುಪಿ, ಎ.22: ಕುಂದಾಪುರ ತಾಲೂಕಿನ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಅಮಾಸೆಬೈಲು, ಮಚ್ಚಟ್ಟು ಹಾಗೂ ರಟ್ಟಾಡಿ ಗ್ರಾಮಗಳಲ್ಲಿರುವ 1497 ಮನೆಗಳು, ದಾರಿದೀಪ, ಎಲ್ಲಾ ದೇವಾಲಯಗಳು ಹಾಗೂ ಮಸೀದಿಗೆ ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಇದೇ ಎ.27ರಂದು ಗ್ರಾಪಂನ್ನು ‘ಸೋಲಾರ್ ಗ್ರಾಮ’ ಎಂದು ಘೋಷಿಸಲಾಗುವುದು ಎಂದು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಜಿ.ಕೊಡ್ಗಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡ್ಗಿ, 2012ರಲ್ಲಿ ಸಾರ್ವಜನಿಕ ಟ್ರಸ್ಟ್ ಆದ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮೂಲಕ ಗ್ರಾಮದಲ್ಲಿ ಸೌರವಿದ್ಯುತ್‌ನ್ನು ಅಳವಡಿಸುವ ಕಾರ್ಯ ಆರಂಭಗೊಂಡಿದ್ದು, ಇದೀಗ ಇಡೀ ಗ್ರಾಮವನ್ನು ರಾಜ್ಯದ ಮೊದಲ ಸೋಲಾರ್ ಗ್ರಾಮವಾಗಿ ಪರಿವರ್ತಿಸಲಾಗಿದೆ ಎಂದರು.
ಅಮಾಸೆಬೈಲು ಗ್ರಾಪಂ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಕರ್ಣಾಟಕ ಬ್ಯಾಂಕ್ ಮಂಗಳೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಜಿಲ್ಲಾಡಳಿತ ಉಡುಪಿ, ಜಿಪಂ ಉಡುಪಿ ಹಾಗೂ ತಾಪಂ ಕುಂದಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಮಾಸೆಬೈಲು ಗ್ರಾಪಂನಲ್ಲಿ ಸೋಲಾರ್ ವಿದ್ಯುತ್ ಯೋಜನೆ ಅನುಷ್ಠಾನಗೊಂಡಿದೆ ಎಂದವರು ಹೇಳಿದರು.
ಎ.27ರ ಗುರುವಾರ ಬೆಳಗ್ಗೆ 10:30ಕ್ಕೆ ಅಮಾಸೆಬೈಲು ಗ್ರಾಪಂನ್ನು ಸೋಲಾರ್ ಗ್ರಾಮವಾಗಿ ಘೋಷಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಮಾಸೆಬೈಲು ಪ್ರೌಢ ಶಾಲೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸೆಲ್ಕೊ ಇಂಡಿಯಾದ ಅಧ್ಯಕ್ಷ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಡಾ.ಎಚ್.ಹರೀಶ್ ಹಂದೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಮಾಸೆಬೈಲು ಗ್ರಾಮದ ಸೋಲಾರ್ ಬೀದಿ ದೀಪಗಳನ್ನು ಉದ್ಘಾಟಿಸಿದರೆ, ಪ್ರತಾಪ್‌ಚಂದ್ರ ಶೆಟ್ಟಿ ಅವರು ಮನೆಗಳಿಗೆ ಸೋಲಾರ್ ದೀಪಗಳನ್ನು ಉದ್ಘಾಟಿಸುವರು. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ದೇವಸ್ಥಾನಗಳಿಗೆ ಕೊಡ ಮಾಡಿದ ಸೋಲಾರ್ ದೀಪಗಳನ್ನು ಕರ್ಣಾಟಕ ಬ್ಯಾಂಕಿನ ಜಿಎಂ ಚಂದ್ರಶೇಖರ್ ರಾವ್ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೋಲಾರ್ ಯೋಜನೆಯ ಅನುಷ್ಠಾನಕ್ಕೆ ಚಾಲನೆ ನೀಡಲಿದ್ದಾರೆ.
ಕೇಂದ್ರ ಸರಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯ, ರಾಜ್ಯ ಸರಕಾರದ ಕ್ರಿಡೆಲ್ (ಕೆಆರ್‌ಇಡಿಎಲ್), ಜಿಲ್ಲಾಡಳಿತ ಹಾಗೂ ವಿವಿಧ ದಾನಿಗಳ ನೆರವಿನಿಂದ ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್ ಅಮಾಸೆಬೈಲ್ ಗ್ರಾಪಂ ವ್ಯಾಪ್ತಿಯ ಮೂರು ಗ್ರಾಮಗಳ ಒಟ್ಟು 1497 ಮನೆಗಳಿಗೆ ಹಾಗೂ 20 ಸೌರ ದಾರಿದೀಪಗಳನ್ನು ಒಟ್ಟು 2.13 ಕೋಟಿರೂ.ಗಳ ಅಂದಾಜು ವೆಚ್ಚದಲ್ಲಿ ಸೆಲ್ಕೋ ಇಂಡಿಯಾ ಮೂಲಕ ಅಳವಡಿಸಿದೆ ಎಂದು ಕೊಡ್ಗಿ ವಿವರಿಸಿದರು.
ಇದಕ್ಕಾಗಿ ಪ್ರತಿ ಫಲಾನುಭವಿಗಳಿಂದ ಎರಡು ದೀಪಗಳಿಗೆ 3,000ರೂ. ಹಾಗೂ ನಾಲ್ಕು ದೀಪಗಳಿಗೆ 6000ರೂ.ಗಳನ್ನು ಪಡೆಯಲಾಗಿದೆ. ಗ್ರಾಮದಲ್ಲಿ 497 ಮನೆಗಳಿಗೆ ಎರಡು ದೀಪ ಹಾಗೂ 1000 ಮನೆಗಳಿಗೆ ನಾಲ್ಕು ದೀಪಗಳನ್ನು ಅಳವಡಿಸಲಾಗಿದೆ. ಗ್ರಾಮದಲ್ಲಿ ಒಟ್ಟು 1850 ಮನೆಗಳಿದ್ದು, 50 ಮನೆಗಳಿಗೆ ಮೊದಲೇ ಸೌರವಿದ್ಯುತ್ ಅಳವಡಿಸಲಾಗಿತ್ತು. ಇನ್ನು 300 ಮನೆಗಳಿಗೆ ಮನೆಯವರೇ ಸೌರದೀಪ ಅಳವಡಿಸಿಕೊಂಡಿದ್ದರು ಎಂದರು.
ಕೇಂದ್ರ ಇಂಧನ ಸಚಿವಾಲಯ ಶೇ.30ರ ಅನುದಾನದಂತೆ 64.17 ಲಕ್ಷ ರೂ.ಗಳನ್ನು ಯೋಜನೆಗೆ ನೀಡಬೇಕಿದೆ. ಅದು ಈವರೆಗೆ 38ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಇನ್ನೂ 26.14ಲಕ್ಷ ರೂ.ಬರಬೇಕಿದೆ. ಕ್ರಿಡೆಲ್ ಶೇ.20ರಂತೆ 42.78 ಲಕ್ಷ ರೂ.ಮಂಜೂರುಗೊಳಿಸಿದೆ. ಫಲಾನುಭವಿಗಳಿಂದ ಒಟ್ಟು 77.31ರೂ.ಗಳಲ್ಲಿ 74 ಲಕ್ಷ ರೂ.ಸಂಗ್ರಹವಾಗಿದೆ. ಜಿಲ್ಲಾಧಿಕಾರಿಯಿಂದ 25 ಲಕ್ಷ ರೂ.ಅನುದಾನ ಸಿಕ್ಕಿದೆ ಎಂದು ಕೊಡ್ಗಿ ತಿಳಿಸಿದರು.
ಇಡೀ ಯೋಜನೆ 2.13 ಕೋಟಿ ರೂ.ಗಳದ್ದಾಗಿದ್ದು, ಈವರೆಗೆ ಎಲ್ಲಾ ಮೂಲಗಳಿಂದ ಸಂಗ್ರಹವಾಗಿರುವ ಒಟ್ಟು ಮೊತ್ತ 1.83 ಕೋಟಿ ರೂ.ಗಳು. ಹೀಗಾಗಿ ಇನ್ನೂ 30.78 ಲಕ್ಷ ರೂ.ಕೊರತೆ ಇದ್ದು, ಇವುಗಳಲ್ಲಿ ಕರ್ಣಾಟಕ ಬ್ಯಾಂಕ್ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿದ ಒಟ್ಟು 7ಲಕ್ಷ ರೂ. ದೇಣಿಗೆಯನ್ನು ಪರಿಗಣಿಸಿದಾಗ ಒಟ್ಟಾರೆಯಾಗಿ ಯೋಜನಾ ಅನುಷ್ಠಾನದಲ್ಲಿ 26.46 ಲಕ್ಷ ರೂ.ಕೊರತೆ ಕಂಡುಬಂದಿದ್ದು, ಇವುಗಳನ್ನು ವಿವಿಧ ಮೂಲಗಳಿಂದ ಭರಿಸಬೇಕಾಗಿದೆ. ಸೋಲಾರ್ ದೀಪಗಳನ್ನು ಅಳವಡಿಸಿರುವ ಸೆಲ್ಕೊ ಮುಂದಿನ ಐದು ವರ್ಷಗಳಿಗೆ ಇವುಗಳ ಸಂಪೂರ್ಣ ನಿರ್ವಹಣೆಗೆ ಒಪ್ಪಿಕೊಂಡಿದೆ ಎಂದೂ ಎ.ಜಿ.ಕೊಡ್ಗಿ ತಿಳಿಸಿದರು.







