ಮಹಿಳೆಯರಿಗೆ ಟೈಲರಿಂಗ್ ತರಬೇತಿಗೆ ಚಾಲನೆ

ಮಣಿಪಾಲ,ಎ.22: ಸಿಂಡಿಕೇಟ್ ಬ್ಯಾಂಕ್ ಕಾರ್ಪೊರೇಟ್ ಕಚೇರಿ ಪ್ರಾಯೋಜಕತ್ವದಲ್ಲಿ ಮಹಿಳೆಯರಿಗೆ ಮೂರು ವಾರಗಳ ಹೊಲಿಗೆ ತರಬೇತಿ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಇಂದು ಪ್ರಾರಂಭಗೊಂಡಿತು.
ತರಬೇತಿಯನ್ನು ಸಿಂಡಿಕೇಟ್ ಬ್ಯಾಂಕಿನ ಕ್ಷೇತ್ರ ಮಹಾಪ್ರಬಂಧಕ ಸತೀಶ್ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಜೀವನದಲ್ಲಿ ಕಲಿತ ವಿದ್ಯೆ, ಗಳಿಸಿ ಕೊಂಡ ಕೌಶಲ್ಯಗಳನ್ನು ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೊಲಿಗೆ ಕೌಶಲ್ಯದಿಂದ ಮಹಿಳೆಯರು ಆತ್ಮ ವಿಶ್ವಾಸಿಗಳಾಗಿ ತಮ್ಮ ಕಾಲ ಮೇಲೆನಿಲ್ಲಲು ಸಾಧ್ಯವಾಗುತ್ತದೆ ಎಂದರು.
ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ ಕೆ.ಎಂ. ಉಡುಪರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಣಿಪಾಲ ವಿವಿ ಸಹಯೋಗ ದೊಂದಿಗೆ ಗ್ರಾಮೀಣ ಮಹಿಳೆಯರ ಆರ್ಥಿಕ ಉನ್ನತಿಗೆ ಸಹಾಯವಾಗುವ ನಿಟ್ಟಿನಲ್ಲಿ ಇನ್ನೂ ಹಲವು ಕ್ಷೇತ್ರಗಳಲ್ಲಿ ತರಬೇತಿಗಳನ್ನು ಬಿವಿಟಿ ಆಯೋಜಿಸಲಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮುಕ್ತಾ ಶ್ರೀನಿವಾಸ್ ಭಟ್, ಬಿವಿಟಿ ಆಡಳಿತಾಧಿಕಾರಿ ಐ.ಜಿ.ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ವಂದಿಸಿದರು. ಉಡುಪಿ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ 31 ಮಹಿಳೆಯರು 21 ದಿನಗಳ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.







