ಜಾತ್ಯತೀತ ಶಕ್ತಿಗಳು ಒಗ್ಗೂಡುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಎ. 22: ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವ ದೃಷ್ಟಿಯಿಂದ ದೇಶದಲ್ಲಿನ ಜಾತ್ಯತೀತ ಶಕ್ತಿಗಳ ಒಗ್ಗೂಡಬೇಕಾದ ಅಗತ್ಯವಿದೆ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ವಾಗತಿಸಿದ್ದಾರೆ.
ಶನಿವಾರ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ 99ನೆ ಜನ್ಮ ದಿನದ ಅಂಗವಾಗಿ ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದರು. ಅನಂತರ ಜಯನಗರದ ಹೊಟೇಲ್‌ನಲ್ಲಿ ಹಿರಿಯ ಸಾಹಿತಿಗಳೊಂದಿಗೆ ಉಪಾಹಾರ ಕೂಟದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ದೇಶದಲ್ಲಿನ ಜಾತ್ಯತೀತ ಶಕ್ತಿಗಳ ಒಗ್ಗೂಡಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆ ನಿಟ್ಟಿನಲ್ಲಿ ಜಾತ್ಯತೀತ ಒಕ್ಕೂಟ ರಚನೆ ಒಳ್ಳೆಯ ಬೆಳವಣಿಗೆ. ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಆದರೆ, ವೈಯಕ್ತಿಕವಾಗಿ ಈ ಸಂಬಂಧ ಹೆಚ್ಚಿನ ಮಾಹಿತಿ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಕೋಮುವಾದಿ ಮತ್ತು ಜಾತಿವಾದಿಗಳನ್ನು ಅಧಿಕಾರಿಗಳನ್ನು ದೂರವಿಡಬೇಕು. ಬಿಹಾರ ಸಿಎಂ ನಿತೀಶ್ ಕುಮಾರ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡುತ್ತಿರುವುದು ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆಯ ಸಂದೇಶ ರವಾನಿಸಿದಂತೆ ಆಗುತ್ತದೆ ಎಂದರು.
ಬಿಜೆಪಿ ಮಿಷನ್-150 ಎಂದು ಹೇಳಿಕೊಳ್ಳುತ್ತಿದೆ. ಆದರೆ, ಅದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. 2018ರ ಚುನಾವಣೆಗೆ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬ ಈಗಾಗಲೇ ಸಮೀಕ್ಷೆ ಆರಂಭಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಚುನಾವಣಾ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದ ಅವರು, ಸಮೀಕ್ಷೆ ವರದಿ ಬಂದ ಬಳಿಕ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುವುದು ಎಂದರು.
‘ಕೆಪಿಸಿಸಿ ನೂತನ ಅಧ್ಯಕ್ಷರ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಉತ್ತರ ಕರ್ನಾಟಕ ಭಾಗಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕೆಂದರೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಐದು ಬಾರಿ ಆಯ್ಕೆಯಾಗಿದ್ದು ಅವರು ಸಮರ್ಥರಿದ್ದಾರೆ. ಅವರೊಂದಿಗೆ ಇನ್ನೂ ಹಲವು ಮಂದಿ ಸಮರ್ಥರಿದ್ದಾರೆ’
-ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ