ನನಗೆ ದೇವರ ಮೇಲೆ ವಿಶ್ವಾಸವಿದೆ. ಕುಮಾರಸ್ವಾಮಿಗೆ ಇದ್ದರೆ ಈಗಲೇ ಧರ್ಮಸ್ಥಳಕ್ಕೆ ಬರಲಿ :ಝಮೀರ್ ಅಹಮದ್ ಸವಾಲು

ಪಡುಬಿದ್ರಿ,ಎ.22: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದೇವರ ಮೇಲೆ ವಿಶ್ವಾಸವಿದೆಯೇ. ನಾನು ಕುರಾನ್ ಜೊತೆ ಧರ್ಮಸ್ಥಳಕ್ಕೆ ಬರಲು ಸಿದ್ದನಿದ್ದೇನೆ. ಅವರು ಸಿದ್ದರಿದ್ದಾರೇಯೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮ್ಮದ್ ಖಾನ್ ಸವಾಲು ಹಾಕಿದರು.
ಪಡುಬಿದ್ರಿಯಲ್ಲಿ ಉದ್ಯಮಿಯೋರ್ವರ ನಿವಾಸದಲ್ಲಿ ತಂಗಿದ್ದ ಅವರನ್ನು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರಿಗೆ ರಾಜಕೀಯ ಬದುಕೇ ಅನಿವಾರ್ಯ, ನಮಗೆ ರಾಜಕೀಯವಿಲ್ಲದಿದ್ದರೂ ಬದುಕಲು ಗೊತ್ತಿದೆ. ಬಂಡಾಯ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಹೇಳಿಕೆ ನೀಡಿದ್ದು ನಾನು. ಇತರ ಯಾವನೂ ಅಂತಹ ಹೇಳಿಕೆ ನೀಡಿಲ್ಲ. ಆದರೆ ನನ್ನ ಮೇಲೆ ಸವಾಲು ಹಾಕಿಲ್ಲ, ಮಾಧ್ಯಮ ಮೂಲಕ ಇತ್ತೀಚೆಗೆ ಚೆಲುವರಾಯ ಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.
ಚೆಲುವರಾಯ ಸ್ವಾಮಿ ಎಂದೂ ಅ ರೀತಿ ಹೇಳಿಕೆ ನೀಡಿಲ್ಲ. ಕುಮಾರಸ್ವಾಮಿ ಏನು ಅಂತ ರಾಜ್ಯದ ಜನಕ್ಕೆ ಗೊತ್ತಿದೆ. 2007ರಲ್ಲಿ ಯಡಿಯೂರಪ್ಪಗೆ ಅಧಿಕಾರ ಹಸ್ತಾಂತರ ವಿಷಯದಲ್ಲಿ ಆಣೆ ಮಾಡಿ ಕೊಟ್ಟ ಮಾತನ್ನು ತಪ್ಪಿದ ಅವರದ್ದು ದ್ವಿಮುಖ ನೀತಿ ಎಂದರು.
ಕೀಳುಮಟ್ಟದ ರಾಜಕೀಯ:
ದೇವೆಗೌಡರು ನನ್ನನ್ನು ಬಿಡಿ ಯಾರನ್ನು ರಾಜಕೀಯದಲ್ಲಿ ಮೇಲೆ ಬರಲು ಬಿಡುವುದಿಲ್ಲ. ಯಾರೇ ಬೆಳೆಯುವ ನಾಯಕರಿದ್ದರೂ ಅವರನ್ನು ಚಿವುಟಿ ಹಾಕಲು ಹೇಸುವುದಿಲ್ಲ.
ಅವರದ್ದೇನಿದ್ದರೂ ಕುಟುಂಬ ರಾಜಕೀಯ ಪಕ್ಷ. ಓರ್ವ ಮಾಜಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಇದೀಗ ನಾಗಮಂಗಲದಲ್ಲಿ ಮನೆ-ಮನೆ ತಿರುಗುತಿದ್ದಾರೆ. ಇಂತಹ ಕೀಳು ರಾಜಕೀಯ ಬಿಡಲಿ. ಜನ ಏನು ಅಂತ ತೀರ್ಮಾನಿಸ್ತಾರೆ. ನಾವು ಎಂದೂ ಅ ರೀತಿ ಮಾಡಲ್ಲ ಎಂದು ಆರೋಪಿಸಿದರು.
ಜೆಡಿಎಸ್ 60ಸ್ಥಾನ ಗಳಿಸಲಿ:
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ 130 ಸ್ಥಾನಗಳಿಸುತ್ತದೆ ಎಂದು ಕುಮಾರಸ್ವಾಮಿಯವರು ಹೇಳುತಿದ್ದಾರೆ. ಬಿಜೆಪಿ ಮಿಷನ್-150 ಆರಂಭಿಸಿದ್ದಾರೆ, ಕುಮಾರಸ್ವಾಮಿ 130 ಸೀಟು ಅಂತಾರೆ. ಒಟ್ಟು 280 ಸೀಟು. ಇರುವುದೇ 224 ಸೀಟು, ನಾನೂ ಹೇಳಬಹುದು 200 ಅಂತ. ಏನಂತ ರಾಜ್ಯದ ಜನ ತೀರ್ಮಾನಿಸುತ್ತಾರೆ ಎಂದರು. ಆದರೆ ಜೆಡಿಎಸ್ ಇಂದಿನ ಸ್ಥಿತಿಯಲ್ಲಿ 50 ರಿಂದ 60 ಸ್ಥಾನ ಗೆದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದರು. ರಾಹುಲ್ ಮೇಲೆ ವಿಶ್ವಾಸವಿದೆ: ಕಾಂಗ್ರೆಸ್‌ನಿಂದ ಯಾವುದೇ ಆಫರ್ ಇಲ್ಲ. ಎಂಎಲ್‌ಎ ಸೀಟ್ ಕೊಟ್ಟೇ ಕೊಡ್ತಾರೆ. ರಾಹುಲ್, ಸೋನಿಯಗಾಂಧಿ ಮೇಲೆ ವಿಶ್ವಾಸವಿದೆ. ಅವರು ಎಂದೂ ಕೊಟ್ಟ ಮಾತನ್ನು ತಪ್ಪಿಲ್ಲ. ಈ ಹಿಂದೆ ಸಂಸದೆಯಾಗಿದ್ದ ಸಾಂಗ್ಲಿಯಾನ ಅವರಿಗೂ ಕಾಂಗ್ರೆಸ್ ಸೀಟು ನೀಡುವ ಭರವಸೆ ನೀಡಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿದ್ದಾರೆ ಎಂದರು. ಎಂಟು ಅಲ್ಲ, ಒಟ್ಟು 15ಮಂದಿ: ಎಲ್ಲಾ ಬಂಡಾಯ ಶಾಸಕರಿಗೂ ಕಾಂಗ್ರೆಸ್‌ನಲ್ಲಿ ಸೀಟು ಖಚಿತ. ಏಳು ಅಲ್ಲ. ಇನ್ನೂ ಎಂಟು ಶಾಸಕರು ಇದ್ದಾರೆ. ನಾಲ್ಕು ತಿಂಗಳು ಕಳೆಯಲಿ. ಒಟ್ಟು 15ಮಂದಿ ನಾವಿದ್ದೇವೆ. ನನ್ನ ಮನಸ್ಸು ಜೆಡಿಎಸ್ ಕಡೆ ಇಲ್ಲ. ಯಾವುದೇ ಕಾರಣಕ್ಕೂ ಕರೆದರೂ ಜೆಡಿಎಸ್‌ಗೆ ಮರಳಲ್ಲ. ಚಾಮರಾಜಪೇಟೆ ಜನ ನನ್ನನ್ನು ರಾಜಕಾರಣಿ ಅಂತ ಭಾವಿಸದೇ ಮನೆ ಮಗ ಅಂತ ತಿಳ್ಕೊಂಡಿದ್ದಾರೆ. ನಾನು ಯಾವ ಪಕ್ಷದಲ್ಲಿ ನಿಂತರೂ ಜನ ಗೆಲ್ಲಿಸ್ತಾರೆ ಎಂದರು.
ಮುಖಂಡರಾದ ಸೈಯದ್ ಮುಜಾಹಿದ್, ಶಕಿಲ್ ನವಾಜ್, ವೆಂಕಟೇಶ್, ಆರೀಫ್ ಪಾಷಾ, ಗುಲಾಮ್ ಮಹಮ್ಮದ್, ದೇವಿಪ್ರಸಾದ್ ಶೆಟ್ಟಿ, ಶೇಖ್ ಅಹಮದ್ ಬೇಂಗಳೆ, ಶಾಲಿಹ್ ಬಜ್ಪೆ ಇದ್ದರು.
ಉಡುಪಿ ಜಿಲ್ಲೆಯಿಂದ 10ಮಂದಿ ಹಜ್ ಭಾಗ್ಯ:
ವರ್ಷಂಪ್ರತಿ 100 ಮಂದಿಯನ್ನು ಝಮೀರ್ ಅಹಮದ್ ಹಜ್ ಯಾತ್ರೆಗೆ ಕಳುಹಿಸುತಿದ್ದಾರೆ. ಉಡುಪಿ ಜಿಲ್ಲೆಯ ಮಸೀದಿಯ ಧರ್ಮಗುರುಗಳಿಗೆ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಬೇಕು ಎಂದು ಗುಲಾಂ ಮುಹಮ್ಮದ್ ಅವರ ಬೇಡಿಕೆಗೆ ಸ್ಪಂಧಿಸಿದ ಅವರು, ಮುಂದಿನ ಭಾರಿ ಉಡುಪಿ ಜಿಲ್ಲೆಯಿಂದ ಹಜ್ ಯಾತ್ರೆಗೆ ಕಳುಹಿಸಲು ನಿರ್ಧರಿಸಿದ್ದಾರೆ.
ಖುರೇಶಿ ಪ್ರಕರಣ: ಮುಸ್ಲಿಮ್ ಮುಖಂಡರ ಭೇಟಿ
ಖುರೇಶಿ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಂ ಸಂಘಟನೆಗಳು ಹಾಗೂ ಮುಖಂಡರು ಸೇರಿ ಮೇ 2 ರಂದು ಮುಸ್ಲಿಂ ಸಮಾವೇಶ ಹಾಗೂ ಮಂಗಳೂರು ಚಲೋ ಕಾರ್ಯಕ್ರಮ ನಡೆಸುವ ಯೋಚನೆಯಲ್ಲಿದ್ದರು. ಈಗಾಗಲೇ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಮಂಗಳೂರಿನ ಖುರೇಶಿ ಪ್ರಕರಣವನ್ನು ಮುಖ್ಯಮಂತ್ರಿಯವರು ಸಿಓಡಿ ತನಿಖೆ ಮಾಡುವಂತೆ ಆದೇಶಿಸಿದ್ದಾರೆ. ಅದರಿಂದ ಸತ್ಯ ಹೊರಬೀಳಲಿದೆ. ಈ ಸಮಯದಲ್ಲಿ ಸಮಾವೇಶ ನಡೆಸಿದರೆ ಖರೇಶಿ ಪ್ರಕರಣೆಕ್ಕೆ ಸಂಬಂಧ ಕಲ್ಪಿಸಿದಂತಾಗುತ್ತದೆ. ಆ ಕಾರಣಕ್ಕೆ ಅವರನ್ನು ಸಮಾವೇಶ ಮುಂದೂಡುವಂತೆ ಮನವೊಲಿಸಲಾಗಿದೆ. ಅದಕ್ಕೆ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಮುಸ್ಲಿಂ ಸಮಾವೇಶ ಮಾಡುವುದಿದ್ದರೆ ಮುಂದಿನ ರಂಜಾನ್ ಮುಗಿದ ಬಳಿಕ ನಡೆಸುವಂತೆ ಸೂಚಿಸಲಾಗಿದೆ.
ಜಮೀರ್ ಅಹ್ಮದ್ ಖಾನ್, ಶಾಸಕ.







