ರಾಜ್ಯಕ್ಕೆ ಕಾಡಲಿದೆ ಕಂಡರಿಯದ ಕುಡಿಯುವ ನೀರಿನ ಭೀಕರ ಕ್ಷಾಮ

ಬೆಂಗಳೂರು, ಎ.22: ಮೇ ತಿಂಗಳ ಅಂತ್ಯದೊಳಗೆ ವಾಡಿಕೆಯಂತೆ ಮಳೆ ಸುರಿಯದಿದ್ದರೆ ಕಾವೇರಿ ಕಣಿವೆ ಪ್ರದೇಶದಲ್ಲಿ ಕುಡಿಯುವ ನೀರಿನ ತತ್ವಾರ ಭೀಕರ ಸ್ವರೂಪ ಪಡೆಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರಾಜ್ಯಕ್ಕೆ ಎಚ್ಚರಿಕೆ ನೀಡಿದೆ.
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆ.ಆರ್.ಎಸ್, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ಲಭ್ಯವಿರುವ ಕುಡಿಯುವ ನೀರಿನ ಪ್ರಮಾಣ ಕೇವಲ ಆರು ಟಿಎಂಸಿ ಮಾತ್ರ. ಈ ಪ್ರದೇಶದಲ್ಲಿನ ಭಾಗಶಃ ಶೇ.75ರಷ್ಟು ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಉಳಿದಿರುವ ಕೆರೆಗಳಲ್ಲಿ ಶೇ.50-60 ರಷ್ಟು ಮಾತ್ರ ನೀರು ಲಭ್ಯವಿದೆ.
ಮೈಸೂರು ಮತ್ತು ಬೆಂಗಳೂರಿನ ಜನತೆ ಕುಡಿಯುವ ನೀರಿಗೆ ಕಾವೇರಿಯನ್ನೇ ಅವಲಂಬಿಸಿದ್ದಾರೆ. ಕಾವೇರಿ ಕಣಿವೆ ಪ್ರದೇಶದಲ್ಲಿನ 60 ಅರೆ ನಗರ ಮತ್ತು 425 ಗ್ರಾಮ ಪಂಚಾಯಿತಿ ಜನರಿಗೆ ಕುಡಿಯುವ ನೀರಿಗೆ ಕಾವೇರಿ ನದಿಯೇ ಆಧಾರ. ಈ ಪ್ರದೇಶಕ್ಕೆ ಪ್ರತಿ ತಿಂಗಳು 3 ಟಿಎಂಸಿ ಕುಡಿಯುವ ನೀರಿಗೆ ಬೇಡಿಕೆಯಿದೆ. ಸದ್ಯ ಕಾವೇರಿ ನದಿಯ ಜಲಾಶಯಗಳಲ್ಲಿ ಲಭ್ಯವಿರುವ 6 ಟಿಎಂಸಿ ನೀರು ಮೇ ತಿಂಗಳವರೆಗೆ ಮಾತ್ರ ದೊರಕಲಿದೆ.
ಮರುಭೂಮಿ ರಾಜ್ಯ ರಾಜಸ್ಥಾನ ಬಿಟ್ಟರೆ ದೇಶದಲ್ಲಿ ಭೀಕರ ಬರಗಾಲ ಆವರಿಸಿದೆ. 125 ವರ್ಷಗಳಲ್ಲಿ ದಾಖಲಾಗಿರುವ ಮಳೆಯ ಪ್ರಮಾಣದಲ್ಲಿ 2016ರಲ್ಲಿ ಅತ್ಯಂತ ಕಡಿಮೆ ಪ್ರಮಾಣದ್ದು. ವಾಡಿಕೆಯಂತೆ 1155 ಮೀ.ಮೀ ಮಳೆಯಾಗಬೇಕಿತ್ತು. ಆದರೆ ಕೇವಲ 400ರಿಂದ 500 ಮೀ.ಮೀ.ಯಷ್ಟು ಮಾತ್ರ ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದರು.
ರಾಜ್ಯದಲ್ಲಿ 40 ವರ್ಷಗಳಲ್ಲಿ ಕಂಡರಿಯದಂತಹ ಭೀಕರ ಬರಗಾಲ ಅವರಿಸಿರುವುದರಿಂದ ಈಗಾಗಲೇ ಕಾವೇರಿ ನೀರನ್ನು ಕೃಷಿ ಬಳಕೆಗೆ ನಿಷೇಧಿಸಲಾಗಿದೆ. ಲಭ್ಯವಿರುವ ನೀರಿನಲ್ಲೇ ಕಾವೇರಿ ಕಣಿವೆಯ ಜನತೆಯ ದಾಹವನ್ನು ತೀರಿಸುವಂತ ಇಕ್ಕಟ್ಟಿನಲ್ಲಿ ರಾಜ್ಯ ಸರಕಾರ ಸಿಲುಕಿದೆ.
ವಾಡಿಕೆ ಮಳೆಯಂತೆ ಶೇ.11ರಷ್ಟು ಮಳೆಯ ಪ್ರಮಾಣ ಮೇ ತಿಂಗಳ ಅಂತ್ಯದೊಳಗೆ ಸುರಿಯಬೇಕು. ಈ ಪ್ರಮಾಣದಷ್ಟು ಮಳೆಯಾಗದಿದ್ದರೆ ರಾಜ್ಯದಲ್ಲಿ ಇತಿಹಾಸದಲ್ಲಿ ಕೇಳರಿಯದಂತ ಕುಡಿಯುವ ನೀರಿನ ಭೀಕರ ಕ್ಷಾಮವನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
ಬೆಂಗಳೂರು ಜನತೆಗೂ ತಟ್ಟಲಿದೆ ನೀರಿನ ಕ್ಷಾಮ...
ಬೆಂಗಳೂರು ಮಹಾನಗರದ ಜನತೆಗೆ ತಿಂಗಳಿಗೆ ಒಂದು ಟಿಎಂಸಿ ನೀರು ಅಗತ್ಯವಿದೆ. ಕಾವೇರಿ ಜಲಾಶಯಗಳಲ್ಲಿ ಉಳಿದಿರುವ ಆರು ಟಿಎಂಸಿ ನೀರಿನಲ್ಲಿ ಮೇ ಅಂತ್ಯದೊಳಗೆ ಎರಡು ಟಿಎಂಸಿ ನೀರು ಬೆಂಗಳೂರಿಗೆ ಮೀಸಲಿಡಬೇಕಿದೆ. ಜೂನ್ ತಿಂಗಳ ಆರಂಭಕ್ಕೂ ಮುನ್ನ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯಾಗದಿದ್ದರೆ ಬೆಂಗಳೂರಿನ ಜನರು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿಯನ್ನು ಎದುರಿಸಬೇಕಿದೆ.
ಜೂನ್ ಮೊದಲನೆ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡುವ ಸಾಧ್ಯತೆ ಇದೆ. ಕಾವೇರಿ ಕಣಿವೆ ಪ್ರದೇಶದಲ್ಲಿ 40 ದಿನಗಳಲ್ಲಿ ಮಳೆಯಾಗದಿದ್ದರೆ ಇತಿಹಾಸದಲ್ಲಿ ಕೇಳರಿಯದಂತಹ ಕುಡಿಯುವ ನೀರಿನ ತತ್ವಾರದ ಭೀಕರ ಸ್ವರೂಪ ರಾಜ್ಯದಲ್ಲಿ ಪ್ರದರ್ಶನವಾಗಲಿದೆ.
-ಡಾ.ಜಿ.ಎಸ್ ಶ್ರೀನಿವಾಸ್ ರೆಡ್ಡಿ, ನಿರ್ದೇಶಕ ಕೆಎಸ್‌ಎನ್‌ಡಿಎಂಸಿ
ಅಂಕಿ ಅಂಶ
-1155 ಮೀ.ಮೀ.- ವಾಡಿಕೆಯಂತೆ ಸುರಿಯುವ ವಾರ್ಷಿಕ ಮಳೆ
- 3,450 ಟಿಎಂಸಿರಾಜ್ಯದ ಒಟ್ಟಾರೆ ಜಲಾಶಯಗಳಲ್ಲಿ, ಕೆರೆಗಳಲ್ಲಿ ಶೇಖರಣೆಯಾಗುವ ನೀರಿನ ಪ್ರಮಾಣ
-2,000 ಟಿಎಂಸಿ ನೀರು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಶೇಖರಣೆಯಾಗುವ ನೀರಿನ ಪ್ರಮಾಣ







