ಫ್ಲಾಟ್,ನಿವೇಶನ ಖರೀದಿಗಾಗಿ ಶೇ.90ರಷ್ಟು ಭವಿಷ್ಯನಿಧಿ ಹಣ ಹಿಂಪಡೆಯಲು ಅವಕಾಶ

ಹೊಸದಿಲ್ಲಿ,ಎ.22: ಉದ್ಯೋಗಿಗಳು ಈಗ ಫ್ಲಾಟ್ ಅಥವಾ ನಿವೇಶನ ಖರೀದಿಗಾಗಿ ತಮ್ಮ ನೌಕರರ ಭವಿಷ್ಯನಿಧಿ(ಇಪಿಎಫ್) ಖಾತೆಯಿಂದ ಶೇ.90ರಷ್ಟು ಹಣವನ್ನು ಹಿಂಪಡೆಯಬಹುದಾಗಿದೆ.
ಸರಕಾರವು ತಂದಿರುವ ನೂತನ ನಿಯಮಗಳಡಿ ಭವಿಷ್ಯನಿಧಿ ಚಂದಾದಾರರು ಒಂದು ಬಾರಿಗೆ ಹಣವನ್ನು ಹಿಂಪಡೆಯಬಹುದಾಗಿದೆ ಅಥವಾ ತಮ್ಮ ಭವಿಷ್ಯನಿಧಿ ಉಳಿತಾಯವನ್ನು ಫ್ಲಾಟ್ ಇಲ್ಲವೇ ಮನೆ ನಿರ್ಮಾಣಕ್ಕೆ ನಿವೇಶನ ಖರೀದಿಯ ಕಂತುಗಳನ್ನು ಕಟ್ಟಲು ಬಳಸಬಹುದಾಗಿದೆ.
ಆದರೆ ಇದಕ್ಕಾಗಿ ಉದ್ಯೋಗಿಯು ಫ್ಲಾಟ್ ಅಥವಾ ನಿವೇಶನವನ್ನು ಯಾವ ಸಹಕಾರಿ ಸಂಘದ ಮೂಲಕ ಖರೀದಿಸುತ್ತಾನೋ ಆ ಸಂಘದ ಕನಿಷ್ಠ ಒಂಭತ್ತು ಸದಸ್ಯರು ಇಪಿಎಫ್ ಚಂದಾದಾರರಾಗಿರುವುದು ಅಗತ್ಯವಾಗಿದೆ ಮತ್ತು ಸದ್ರಿ ಸಹಕಾರಿ ಸಂಘವು ಯಾವುದೇ ಕಾನೂನಿನಡಿ ನೋಂದಾಯಿತವಾಗಿರಬೇಕಾಗಿರುತ್ತದೆ.
2022ರೊಳಗೆ ಎಲ್ಲರಿಗೂ ಮನೆಗಳನ್ನು ಒದಗಿಸುವ ಪ್ರಧಾನ ಮಂತ್ರಿಗಳ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ತಿಳಿಸಿದರು.
ಈವರೆಗೂ ಐದು ವರ್ಷಗಳ ಸೇವಾವಧಿಯನ್ನು ಪೂರೈಸಿರುವ ಉದ್ಯೋಗಿಗಳು ಫ್ಲಾಟ್ ನಿರ್ಮಾಣಕ್ಕಾಗಿ ತಮ್ಮ 36 ತಿಂಗಳ ವೇತನದ ಮತ್ತು ನಿವೇಶನ ಖರೀದಿಗಾಗಿ 24 ತಿಂಗಳ ವೇತನದ ಸಮಾನ ಮೊತ್ತವನ್ನು ತಮ್ಮ ಭವಿಷ್ಯನಿಧಿ ಖಾತೆಯಿಂದ ಹಿಂಪಡೆದುಕೊಳ್ಳಲು ಅವಕಾಶವಿತ್ತು.
ಕನಿಷ್ಠ ಮೂರು ವರ್ಷಗಳಿಂದ ಭವಿಷ್ಯನಿಧಿ ಖಾತೆಯನ್ನು ಹೊಂದಿರುವರು ತಮ್ಮ ಮಾಸಿಕ ವಂತಿಗೆಯಿಂದ ಗೃಹಸಾಲ ಮರುಪಾವತಿ ಸೇರಿದಂತೆ ಮನೆ ಉದ್ದೇಶಕ್ಕಾಗಿ ತಮ್ಮ ಉಳಿತಾಯವನ್ನು ಹಿಂಪಡೆಯಬಹುದಾಗಿದೆ.
ಶೇ.90ರಷ್ಟು ಸಂಚಿತ ಭವಿಷ್ಯನಿಧಿ ಹಣವನ್ನು ಒಂದು ಬಾರಿ ಹಿಂಪಡೆಯುವು ದರೊಂದಿಗೆ ಸದಸ್ಯರು ಮಾಸಿಕ ಭವಿಷ್ಯನಿಧಿ ವಂತಿಗೆಯ ಮೂಲಕ ಸಾಲದ ಪೂರ್ಣ ಅಥವಾ ಭಾಗಶಃ ಮರುಪಾವತಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು ಎಂದು ಇಪಿಎಫ್‌ಒ ಕೇಂದ್ರ ಕಚೇರಿಯು ಎ.21ರಂದು ತನ್ನೆಲ್ಲ ಪ್ರಾದೇಶಿಕ ಪಿಎಫ್ ಆಯುಕ್ತರಿಗೆ ಕಳುಹಿಸಿರುವ ನಿರ್ದೇಶದಲ್ಲಿ ತಿಳಿಸಿದೆ.