ಮಕ್ಕಳ ರಕ್ಷಣಾ ಕಾನೂನು ಅನುಷ್ಠಾನದಲ್ಲಿ ಹಿನ್ನಡೆ: ವೆಂಕಟೇಶ್ ನಾಯ್ಕ್

ಉಡುಪಿ, ಎ.22: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿದ್ದರೂ ಕೂಡ ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಶನಿವಾರ ನಿಟ್ಟೂರಿನ ಬಾಲಕಿಯರ ಬಾಲ ಮಂದಿರದಲ್ಲಿ ಆಯೋಜಿಸಲಾದ ‘ವಸಂತೋತ್ಸವ’ ಚಿಣ್ಣರ ಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಮಕ್ಕಳ ರಕ್ಷಣೆಗಾಗಿ ಇರುವ ಪೋಕ್ಸೋ ಕಾಯಿದೆಯಡಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ಥ ಮಗುವಿಗೆ ಸೂಕ್ತ ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಹಾಗೂ ಪ್ರಕರಣ ಕುರಿತು ಸಂಗ್ರಹಿಸುವ ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಕಾಯಿದೆಯ ಪರಿಣಾಮಕಾರಿ ಅನುಷ್ಠಾನ ಆಗುತ್ತಿಲ್ಲ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಮಕ್ಕಳ ರಕ್ಷಣೆ ಹಾಗೂ ಬೆಳವಣಿಗೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವುದು ಎಂದರು.
ವಸಂತ ಮಾಸದಲ್ಲಿ ಮಕ್ಕಳು ಮಣ್ಣಿನಲ್ಲಿ ಆಟವಾಡಿ, ಮಣ್ಣಿನ ಸ್ವಾದವನ್ನು ಆಸ್ವಾದಿಸಬೇಕು. ಪ್ರತಿ ಮಗುವೂ ಸಸಿಗಳನ್ನು ನೆಡುವುದನ್ನು ರೂಢಿ ಮಾಡಿ ಕೊಂಡು ಭೂಮಿಯ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.
ಮಕ್ಕಳ ರಕ್ಷಣೆಯಲ್ಲಿ ಸಾಧನೆ ಮಾಡಿದ ಉಡುಪಿ ಪೊಲೀಸ್ ಇಲಾಖೆಯ ಸಹಾಯಕ ಪೊಲೀಸ್ ಉಪನಿರೀಕ್ಷಕಿ ಮುಕ್ತಾ ಬಾಯಿ ಮತ್ತು ಕಾರ್ಕಳ ಟಿ.ಎಂ.ಎ. ಪೈ ಆಸ್ಪತ್ರೆಯ ಡಾ.ಸತೀಶ್ ನಾಯಕ್ ಅವರನ್ನು ಇದೇ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ರೋಟರಿಯ ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ, ಸ್ವಪ್ನಾ ಗಣೇಶ್ ಉಪಸ್ಥಿತರಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಕೆ.ನಾರಾಯಣ ಸ್ವಾಗತಿಸಿದರು. ಅಣ್ಣಯ್ಯ ಕಾರ್ಯಕ್ರಮ ನಿರೂಪಿಸಿದರು.







