ಭಿನ್ನಮತೀಯರ ಮನವೊಲಿಕೆಗೆ ಬಿಎಸ್‌ವೈ ಯತ್ನ

ಬೆಂಗಳೂರು, ಎ.22: ತಮ್ಮ ನಾಯಕತ್ವದ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಭಿನ್ನಮತೀಯ ಮುಖಂಡರ ಮನವೊಲಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ.
ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಮೇಯರ್ ವೆಂಕಟೇಶ್‌ಮೂರ್ತಿ ಅವರ ಅಮಾನತ್ತು ಆದೇಶವನ್ನು ಹಿಂಪಡೆಯುವಂತೆ ಬೆಂಗಳೂರು ನಗರ ಬಿಜೆಪಿ ಘಟಕದ ಅಧ್ಯಕ್ಷ ಸದಾಶಿವಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಭಿನ್ನಮತೀಯ ನಾಯಕರು ಹೊಸದಿಲ್ಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಯಡಿಯೂರಪ್ಪ ವಿರುದ್ಧ ದೂರು ನೀಡಲು ನಿರ್ಧರಿಸಿರುವ ಕುರಿತು ನಿನ್ನೆಯಷ್ಟೆ ಪ್ರತಿಕ್ರಿಯೆ ನೀಡಿದ್ದ ಯಡಿಯೂರಪ್ಪ, ಯಾರು ಎಲ್ಲಿಗೆ ಬೇಕಾದರೂ ಹೋಗಲಿ, ಏನಾದರೂ ಹೇಳಲಿ, ಅದಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದರು.
ಆತ್ಮಾವಲೋಕನ ಸಭೆ: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಪರಾಭವಗೊಂಡ ಹಿನ್ನೆಲೆಯಲ್ಲಿ ಎ.23ರಂದು ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಆತ್ಮಾವಲೋಕನ ಸಭೆ ನಡೆಯಲಿದೆ.





