ಇನ್ನು ಹಿಂದಿಯಲ್ಲೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು

ಹೊಸದಿಲ್ಲಿ,ಎ.23: ಜನರು ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್‌ನಲ್ಲಿ ಹಿಂದಿಯಲ್ಲಿ ಅರ್ಜಿ ಸಲ್ಲಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅವಕಾಶ ಕಲ್ಪಿಸಿದೆ.
ಅಧಿಕೃತ ಭಾಷೆ ಕುರಿತ ಸಂಸದೀಯ ಸಮಿತಿಯು ತನ್ನ ಒಂಭತ್ತನೇ ವರದಿಯಲ್ಲಿ ಈ ಸಂಬಂಧ ಮಾಡಿರುವ ಶಿಫಾರಸನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಇತ್ತೀಚಿಗೆ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಸಚಿವಾಲಯವು ಈ ಕ್ರಮವನ್ನು ಕೈಗೊಂಡಿದೆ.ವರದಿಯನ್ನು 2011ರಲ್ಲಿ ಸಲ್ಲಿಸಲಾಗಿತ್ತು.
ಎಲ್ಲ ಪಾಸ್‌ಪೋರ್ಟ್ ಕಚೇರಿಗಳಲ್ಲಿ ದ್ವಿಭಾಷಾ ಅರ್ಜಿ ನಮೂನೆಗಳನ್ನು ಲಭ್ಯವಾಗಿ ಸಬೇಕು ಮತ್ತು ಹಿಂದಿಯಲ್ಲಿ ತುಂಬಲಾದ ಅರ್ಜಿಗಳನ್ನೂ ಸ್ವೀಕರಿಸಬೇಕು ಎಂದು ಸೂಚಿಸಿದ್ದ ಸಮಿತಿಯು, ನೀಡಲಾಗುವ ಎಲ್ಲ ಪಾಸ್‌ಪೋರ್ಟ್‌ಗಳಲ್ಲಿ ಎಂಟ್ರಿಗಳನ್ನು ಹಿಂದಿಯಲ್ಲಿಯೂ ಉಲ್ಲೇಖಿಸಬೇಕು ಎಂದು ಶಿಫಾರಸು ಮಾಡಿತ್ತು.
ಸಾರ್ವಜನಿಕರು ಈಗ ಪಾಸ್‌ಪೋರ್ಟ್‌ಗಾಗಿ ಹಿಂದಿಯಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ತುಂಬಿ ಅಪ್‌ಲೋಡ್ ಮಾಡಬಹುದಾಗಿದೆ.
ಹೀಗೆ ಭರ್ತಿ ಮಾಡಿದ ಅರ್ಜಿಗಳ ಪ್ರಿಂಟೌಟ್‌ಗಳನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಮತ್ತು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳಲಿ ಸ್ವೀಕರಿಸಲಾಗುವುದಿಲ್ಲ.
ಪಾಸ್‌ಪೋರ್ಟ್ ಮತ್ತು ವೀಸಾಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ಜಾಲತಾಣಗಳಲ್ಲಿ ಹಿಂದಿಯಲ್ಲಿ ಲಭ್ಯವಾಗಿ ಸಬೇಕು ಎಂಬ ಸಮಿತಿಯ ಶಿಫಾರಸನ್ನೂ ಒಪ್ಪಿಕೊಳ್ಳಲಾಗಿದೆ ಎಂದು ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.