ಗೋರಕ್ಷಕರಾಯಿತು....ಈಗ ಪ್ರಾಣಿಹಕ್ಕು ಕಾರ್ಯಕರ್ತರ ಸರದಿ
ರಾಷ್ಟ್ರ ರಾಜಧಾನಿಯಲ್ಲಿ ಕೋಣ ಸಾಗಾಟಗಾರರಿಗೆ ಥಳಿತ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಎ.23: ಉತ್ತರ ಪ್ರದೇಶ,ರಾಜಸ್ಥಾನ ಇತ್ಯಾದಿ ಕಡೆಗಳಲ್ಲಿ ಜಾನುವಾರು ಸಾಗಾಟಗಾರರ ವಿರುದ್ಧ ತಥಾಕಥಿತ ಗೋರಕ್ಷಕರ ಕ್ರೌರ್ಯ ಹೆಚ್ಚುತ್ತಿದ್ದರೆ ಇತ್ತ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರಾಣಿಹಕ್ಕುಗಳ ಕಾರ್ಯಕರ್ತರು ತಾವೇನೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ.
ಶನಿವಾರ ತಡರಾತ್ರಿ ಆಗ್ನೇಯ ದಿಲ್ಲಿಯ ಕಲ್ಕಾಜಿ ಪ್ರದೇಶದಲ್ಲಿ ಟ್ರಕ್ಕೊಂದರಲ್ಲಿ ಕೋಣಗಳನ್ನು ಸಾಗಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ‘ಪೀಪಲ್ ಫಾರ್ ಆ್ಯನಿಮಲ್ಸ್ (ಪಿಎಫ್ಎ) ’ ಸಂಘಟನೆಯ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಂದ ಹಾಗೆ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಈ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾಗಿದ್ದು, ಅದರ ಅಧ್ಯಕ್ಷೆಯೂ ಆಗಿದ್ದಾರೆ.
ಎಫ್ಐಆರ್ನಲ್ಲಿ ಆರೋಪಿಗಳು ಪಿಎಫ್ಎ ಸದಸ್ಯರೆಂದು ಹೆಸರಿಸಲಾಗಿದ್ದರೂ, ತನಗೂ ಈ ಘಟನೆಗೂ ಸಂಬಂಧವಿರುವುದನ್ನು ಪಿಎಫ್ಎ ನಿರಾಕರಿಸಿದೆ.
ಪ್ರಾಣಿಹಕ್ಕು ಕಾರ್ಯಕರ್ತ ಹಾಗೂ ಪಿಎಫ್ಎ ಪದಾಧಿಕಾರಿ ಗೌರವ್ ಗುಪ್ತಾ ಶನಿವಾರ ರಾತ್ರಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೋಣಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ತಿಳಿಸಿದ್ದರು ಎಂದು ಪೊಲೀಸರು ಹೇಳಿದರು.
ಗುಪ್ತಾ ನೇತೃತ್ವದಲ್ಲಿ ಪಿಎಫ್ಎ ಕಾರ್ಯಕರ್ತರು ತಮ್ಮನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಕೋಣಗಳನ್ನು ಸಾಗಿಸುತ್ತಿದ್ದ ಟ್ರಕ್ನಲ್ಲಿದ್ದ ರಿಝ್ವಿನ್,ಆಶು ಮತ್ತು ಕಾಮಿಲ್ ಆರೋಪಿಸಿದ್ದಾರೆ. ಗಾಯಗೊಂಡಿರುವ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿ ಸಲಾಗಿದೆ. 14 ಕೋಣಗಳು ಮತ್ತು ಟ್ರಕ್ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಟ್ರಕ್ ಗಾಝಿಪುರ ಮಂಡಿಗೆ ಸಾಗುತ್ತಿತ್ತೆನ್ನಲಾಗಿದೆ.
ದಿಲ್ಲಿಯಲ್ಲಿ ಪಿಎಫ್ಎ ಘಟಕವನ್ನು ನಾವು ಹೊಂದಿಲ್ಲ. ದೇಶಾದ್ಯಂತ ನಮ್ಮ 10,000 ಸ್ವಯಂಸೇವಕರಿದ್ದಾರೆ. ಕೋಣ ಸಾಗಾಟದಾರರ ಮೇಲೆ ಯಾರೇ ಹಲ್ಲೆ ನಡೆಸಿರಲಿ,ಅದು ಅವರ ವ್ಯಕ್ತಿಗತ ಕೃತ್ಯವಾಗಿದೆ. ಸಂಘಟನೆಗೆ ಯಾವುದೇ ಸಂಬಂಧವಿಲ್ಲ ಎಂದು ಮೇನಕಾ ಗಾಂಧಿಯವರ ಕಚೇರಿಯು ತಿಳಿಸಿದೆ.
ಈ ಘಟನೆಯ ಕುರಿತಂತೆ ಮೇನಕಾ ಪ್ರದೇಶದ ಡಿಸಿಪಿ ಜೊತೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿದವು.
ಈ ಬಗ್ಗೆ ದೂರು -ಪ್ರತಿದೂರುಗಳು ದಾಖಲಾಗಿವೆ