ಚಿಟ್‌ಫಂಡ್ ಹಣ ಕೇಳಿದ ದಂಪತಿಯನ್ನು ಪೆಟ್ರೋಲ್ ಸುರಿದು ಕೊಂದರು

ಅಂಬಲಪುಝ(ಕೇರಳ), ಎ. 23: ಚಿಟ್‌ಫಂಡ್ ಹಣವನ್ನು ಕೇಳಲು ಬಂದ ದಂಪತಿಯನ್ನು ಪೆಟ್ರೋಲ್ ಸುರಿದು ಕೊಲೆಮಾಡಿದ ಘಟನೆ ನಡೆದಿದೆ. ಮೃತರನ್ನು ಇಡುಕ್ಕಿಯ ದಂಪತಿ ವೇಣು(54), ಹಾಗೂ ಪತ್ನಿ ಸುಮಾ(50) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಬಿ ಆ್ಯಂಡ್ ಬಿ ಚಿಟ್‌ಫಂಡ್ ಕಂಪೆನಿ ಮಾಲಕ ಅಂಬಲಪುಝ ಸುರೇಶ್ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ 7:30ಕ್ಕೆ ಸುರೇಶ್‌ನ ಮನೆಯ ಮುಂದೆ ದಾರುಣ ಈ ಘಟನೆ ನಡೆದಿದ್ದು, ತಮ್ಮ ಮೂರು ಲಕ್ಷ ಅರುವತ್ತು ಸಾವಿರ ರೂಪಾಯಿ ಚಿಟ್ ಫಂಡ್ ಹಣ ವಸೂಲಾತಿಗೆ ಬಂದಿದ್ದ ದಂಪತಿಯನ್ನು ಸುರೇಶ್ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಂದು ಹಾಕಿದ್ದಾನೆ. ವೇಣು ಸಾಯುವ ವೇಳೆ ಹೀಗೆ ಹೇಳಿಕೆ ನೀಡಿದ್ದಾರೆ. ಸಹೋದರನ ಪುತ್ರಿಯ ಮದುವೆಗೆ ಹಣದ ಅಗತ್ಯವಿದೆ ಎಂದು ದಂಪತಿ ನಿನ್ನೆ ಬೆಳಗ್ಗೆ ಸುರೇಶನ ಮನೆಗೆ ಬಂದಿದ್ದರು. ಕೊಲೆ ಆರೋಪಿ ಸುರೇಶ್ ಹಲವಾರು ಮಂದಿಗೆ ಚಿಟ್‌ಫಂಡ್ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ ವ್ಯಕ್ತಿಯಾಗಿದ್ದು,ಈತನ ವಿರುದ್ಧ ವಂಚನೆ ಪ್ರಕರಣದಾಖಲಾಗಿದೆ. ಇತ್ತೀಚೆಗೆ ಕೋರ್ಟಿಗೆ ಹಾಜರಾಗಿ ಜಾಮೀನು ಮೂಲಕ ಹೊರಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟಿರುವ ದಂಪತಿ ವ್ಯಾನ್‌ನಲ್ಲಿ ಲೈನ್‌ಸೇಲ್ ಮಾಡಿ ಜೀವನ ನಡೆಸುತ್ತಿದ್ದರು. ದಂಪತಿಯ ಮೃತದೇಹ ಆಲಪ್ಪುಝ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ.