ಮರ್ಕಝುಲ್ ಹುದಾ ಕುಂಬ್ರ ಮದೀನಾ ಘಟಕದಿಂದ ರಶೀದ್ ವಿಟ್ಲರಿಗೆ ಸನ್ಮಾನ

ಮದೀನಾ, ಎ.23: ಮರ್ಕಝುಲ್ ಹುದಾ ಕುಂಬ್ರ, ಪುತ್ತೂರು ಇದರ ಮದೀನಾ ಘಟಕದ ಪ್ರಥಮ ಮಾಸಿಕ ಸಭೆಯು ಮದೀನಾ ಮುನವ್ವರದ ಹೋಟೆಲ್ ಝಹ್ರತ್ತೈಬಾ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮರ್ಕಝುಲ್ ಹುದಾ ಕುಂಬ್ರ ಮದೀನಾ ಘಟಕ ಸಮಿತಿ ಸಲಹೆಗಾರ ಫಾರೂಕ್ ನಈಮಿ ಉದ್ಘಾಟಿಸಿ, ಇಸ್ರಾಹ್ ಮಿಹ್ರಾಜ್ ಸಂದೇಶ ಸಾರಿದರು.
ಇಂದಿನ ಸನ್ನಿವೇಶದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಧಾರ್ಮಿಕ, ಲೌಕಿಕ ಶಿಕ್ಷಣ ನೀಡುವ ಮರ್ಕಝುಲ್ ಹುದಾ ಕುಂಬ್ರದಂತಹ ಕಾಲೇಜುಗಳ ಅವಶ್ಯಕತೆಯಿದ್ದು, ಇನ್ನಷ್ಟು ಮಹಿಳಾ ಕಾಲೇಜುಗಳು ಸ್ಥಾಪನೆಯಾಗಲಿ ಎಂದು ಹಾರೈಸಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ್ದ ಮರ್ಕಝುಲ್ ಹುದಾ ಕುಂಬ್ರದ ಮಾಜಿ ಸದಸ್ಯ ಹಾಗೂ ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಮಾತನಾಡಿ, ವಿದೇಶದಲ್ಲಿ ಕಷ್ಟ ಪಟ್ಟು ದುಡಿದು ತಮ್ಮ ವರಮಾನದಲ್ಲಿ ಒಂದು ಪಾಲನ್ನು ಮರ್ಕಝುಲ್ ಹುದಾ ಕಾಲೇಜಿನಂತಹ ಸಂಸ್ಥೆಗಳಿಗೆ ನೀಡಿ, ಅದರ ಏಳಿಗೆಗೆ ಕಾರಣರಾದ ಪ್ರವಾಸಿಗರ ಕೆಲಸ ಶ್ಲಾಘನೀಯ ಎಂದರು.
ಇದೇ ವೇಳೆ ಮರ್ಕಝುಲ್ ಹುದಾ ಕುಂಬ್ರ ಇದರ ಮದೀನಾ ಘಟಕದ ವತಿಯಿಂದ ರಶೀದ್ ವಿಟ್ಲರನ್ನು ಸನ್ಮಾನಿಸಲಾಯಿತು. ಮರ್ಕಝುಲ್ ಹುದಾ ಕುಂಬ್ರ ಮದೀನಾ ಘಟಕದ ಅಧ್ಯಕ್ಷ ಇಬ್ರಾಹೀಂ ಮದನಿ ಮರ್ದಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಂಗಮ್ ಸುಳ್ಯ, ಕೋಶಾಧಿಕಾರಿ ಇಸ್ಮಾಯಿಲ್ ಕಿನ್ಯಾ, ಉಪಾಧ್ಯಕ್ಷರುಗಳಾದ ತಾಜುದ್ದೀನ್ ಸುಳ್ಯ, ರಝಾಕ್ ಅಳಕೆಮಜಲ್, ಸಮಿತಿ ಸಲಹೆಗಾರ ಅಶ್ರಫ್ ಸಖಾಫಿ ನೂಜಿ ಮತ್ತಿತರರು ಉಪಸ್ಥಿತರಿದ್ದರು.
ಮರ್ಕಝುಲ್ ಹುದಾ ಮದೀನಾ ಘಟಕದ ಸಹಕಾರ್ಯದರ್ಶಿ ಉಮ್ಮರ್ ಗೇರುಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಕೀಂ ಬೋಳಾರ್ ವಂದಿಸಿದರು.







