ಅರ್ಜಿ ಸಲ್ಲಿಸಿದರೆ 3 ತಿಂಗಳಲ್ಲಿ ಗರೋಡಿಗಳಿಗೆ ಪಹಣಿ ಮಂಜೂರು: ಸಚಿವ ಕಾಗೋಡು ತಿಮ್ಮಪ್ಪ

ಉಡುಪಿ, ಎ.23: ಗರೋಡಿಗಳ ಜಾಗದ ಸಮಸ್ಯೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಮೂರು ತಿಂಗಳೊಳಗೆ ಪಹಣಿ ಮಂಜೂರು ಮಾಡಿ ಕೊಡಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಶ್ರಯದಲ್ಲಿ ಅಜ್ಜರಕಾಡು ಪುರ ಭವನದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ವ್ಯಾಪ್ತಿಯ ಗರೋಡಿ ಗುರಿಕಾರರ ಸನ್ಮಾನ ಮತ್ತು ಪ್ರಮುಖರ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಗರೋಡಿಗಳ ಜೀರ್ಣೋದ್ಧಾರ ಹಾಗೂ ಹೊಸ ಗರೋಡಿಗಳ ನಿರ್ಮಾಣಕ್ಕೆ ಮುಜರಾಯಿ ಇಲಾಖೆ ಮೂಲಕ ಅನುದಾನ ನೀಡಲು ಅವಕಾಶವಿದೆ. ಆದರೆ ಇಲಾಖೆಯ ವ್ಯಾಪ್ತಿಗೆ ಒಳಪಡದ ದೈವಸ್ಥಾನ ಹಾಗೂ ದೇವಸ್ಥಾನಗಳಿಗೆ ಹೆಚ್ಚು ಅನುದಾನ ನೀಡಲು ಆಗುವುದಿಲ್ಲ. ಗರೋಡಿಗಳ ಜೀರ್ಣೋದ್ಧಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ತಹಶೀಲ್ದಾರ್ ಮೂಲಕ ಪ್ರಸ್ತಾಪ ಸಲ್ಲಿಸಿದರೆ ಈ ವರ್ಷ 10 ಗರೋಡಿಗಳಿಗೆ ಸರಕಾರದಿಂದ ಅನುದಾನ ಮಂಜೂರು ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಗರೋಡಿಗಳನ್ನು ನಿಯಮಬದ್ಧವಾಗಿಯೇ ನಿರ್ಮಿಸ ಬೇಕು. ಗರೋಡಿಗಳಲ್ಲಿ ಜಾತಿ ಸಾಮರಸ್ಯವನ್ನು ಕಾಣಬಹುದಾಗಿದೆ. ಆದರೆ ಗರೋಡಿಯಲ್ಲಿ ಕೆಲಸ ಮಾಡುವವರು ಯಜಮಾನಿಕೆ ತೋರಿಸುವವರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಗರೋಡಿಯ ಅರ್ಚಕರಿಗೆ ಮಾಸಾಶನ ನೀಡುವ ಕುರಿತು ಸಭೆ ಕರೆದು ಚರ್ಚೆ ಮಾಡಿ, ಕಾನೂನು ರೀತಿಯ ಕ್ರಮ ತೆಗೆದು ಕೊಳ್ಳಲಾಗುವುದು ಎಂದರು.
ವೇದಿಕೆಯಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯ ಜನಾರ್ದನ ತೋನ್ಸೆ, ನಗರಸಭೆ ಸದಸ್ಯ ಯಶ್ಪಾಲ್ ಸುವರ್ಣ, ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯ ಕೆ.ಉದಯಕುಮಾರ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಅಶೋಕ್ ಸುವರ್ಣ, ಮಾಜಿ ಶಾಸಕ ಬಸವರಾಜ್, ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ, ಗೌರವಾಧ್ಯಕ್ಷ ಅಚ್ಯುತ ಕಲ್ಮಾಡಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಲ್ಮಾಡಿ ಉಪಸ್ಥಿತರಿದ್ದರು.







