ಕನ್ನಡ ಪುಸ್ತಕ ಮಾರುಕಟ್ಟೆ ವಿಸ್ತರಣೆ ಅಗತ್ಯ: ಡಾ.ವಸುಂಧರಾ ಭೂಪತಿ
ವಿಶ್ವ ಪುಸ್ತಕ ದಿನಾಚರಣೆ
ಬೆಂಗಳೂರು, ಎ. 23: ಸಂಕಷ್ಟದಲ್ಲಿರುವ ಕನ್ನಡ ಪುಸ್ತಕ ಮಾರುಕಟ್ಟೆಯನ್ನು ಮಾಲ್‌ಗಳು ಮತ್ತು ಆನ್‌ಲೈನ್ ಕ್ಷೇತ್ರಕ್ಕೂ ವಿಸ್ತರಿಸಲು ಸರಕಾರ ಚಿಂತಿಸಬೇಕಿದೆ ಎಂದು ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದ್ದಾರೆ.
ರವಿವಾರ ನಗರದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಸಾಹಿತ್ಯ ಅಕಾಡಮಿ, ಕರ್ನಾಟಕ ಪ್ರಕಾಶಕರ ಸಂಘ, ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಪುಸ್ತಕಗಳ ಮಾರಾಟಕ್ಕೆ ಮಾಲ್‌ಗಳಲ್ಲಿ ಅವಕಾಶ ಕಲ್ಪಿಸುವ ಕುರಿತು ಸರಕಾರ ಮುಂದಾಗಬೇಕು. ನೇರವಾಗಿ ಓದುಗನ ಕೈ ಸೇರುವಂತೆ ಆನ್‌ಲೈನ್ ಕ್ಷೇತ್ರದಲ್ಲೂ ಕನ್ನಡ ಪುಸ್ತಕಗಳು ಲಭಿಸುವಂತೆ ಸರಕಾರ ಯೋಜನೆಯೊಂದನ್ನು ರೂಪಿಸಬೇಕು. ನಗರದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪುಸ್ತಗಳ ಮಾರಾಟ ಪ್ರದರ್ಶನಕ್ಕೆ ಸರಕಾರ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಾಹಿತ್ಯ ಪರಿಚಾರಿಕಿ ಶಶಿಕಲಾ ಬೆಳಗಲಿ ಮಾತನಾಡಿ, ಕನ್ನಡ ಪುಸ್ತಕಗಳನ್ನು ಆತಂಕದಲ್ಲೇ ಮಾರಾಟ ಮಾಡಲು ಆರಂಭಿಸಿದೆ. ಆದರೆ ನಿರೀಕ್ಷೆಗೂ ಮೀರಿ ಪುಸ್ತಕಗಳ ಮಾರಾಟ ಮಾಡುತ್ತಿದ್ದೇನೆ. ನಮ್ಮ ಬಳಿ ವೈಚಾರಿಕಕತೆಗೆ ಸಂಬಂಧಿಸಿ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಸಾಹಿತ್ಯ ಅಕಾಡಮಿ ಉಪಾಧ್ಯಕ್ಷ ಡಾ.ಚಂದ್ರಶೇಖರ್ ಕಂಬಾರ ಮಾತನಾಡಿ, ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ಭದ್ರವಾದ ಕಾನೂನು ರೂಪಿಸಬೇಕಿದೆ. ಆದರೆ ನ್ಯಾಯಾಂಗವೇ ಇಂಗ್ಲಿಷ್ ಪರವಿರುವುದರಿಂದ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡಮಿಯ ದಕ್ಷಿಣ ಪ್ರಾದೇಶಿಕ ಕೇಂದ್ರದ ಕಾರ್ಯದರ್ಶಿ ಎಸ್.ಸಿ.ಮಹಾಲಿಂಗಾಶ್ವೇರ್, ಪ್ರಕಾಶಕರಾದ ಪ್ರಕಾಶ್ ಕಂಬತ್ತಳ್ಳಿ, ಮುರಳಿ ಸೇರಿದಂತೆ ಇತರರು ಇದ್ದರು.