ಸಾಲಬಾಧೆ: ಇಬ್ಬರು ರೈತರ ಆತ್ಮಹತ್ಯೆ

ಚಿಕ್ಕಮಗಳೂರು, ಎ.24: ಸಾಲಭಾದೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ಯಾವಣ ಎಂಬಲ್ಲಿನ ರತ್ನಾಕರ(40) ಸಾಲಭಾದೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಜಮೀನು ಅಭಿವೃದ್ಧಿಗಾಗಿ ಸಹಕಾರ ಬ್ಯಾಂಕ್‌ನಲ್ಲಿ ಹಾಗೂ ಖಾಸಗಿಯವರಿಂದ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟ ತಾಳಲಾರದೇ ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮಸಿಗೆ ಗ್ರಾಮದ ಮಲ್ಲಪ್ಪಗೌಡ ಎಂಬವರ ಪುತ್ರ ಪ್ರಕಾಶ್(42) ಸಾಲ ನೀಡಿದವರ ಕಾಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ. ಇವರು ಕೃಷಿಗಾಗಿ ಕೃಷಿ ಅಭಿವೃದ್ಧಿ ಬ್ಯಾಂಕ್ ಹಾಲಂದೂರು, ವ್ಯವಸಾಯ ಸೇವಾ ಸಹಕಾರ ಸಂಘ ಮೆಣಸೆ, ಎಸ್.ಬಿಎಂ ಶೃಂಗೇರಿ ಹಾಗೂ ಕುಂಚೇಬೈಲು ಶಾಖೆಗಳಿಂದ ಸುಮಾರು 5 ಲಕ್ಷ ರೂ.ಗಳ ಸಾಲ ಪಡೆದಿದ್ದರು.
ಅಡಿಕೆಗೆ ಹಳದಿ ಎಲೆ ರೋಗ ಬಾಧಿಸಿದ್ದರಿಂದ ಸರಿಯಾದ ಫಸಲು ಬಂದಿರಲಿಲ್ಲ. ಜಮೀನು ಇಳುವರಿ ಕಡಿಮೆಯಾಗಿತ್ತು. ಸಕಾಲದಲ್ಲಿ ಸಾಲ ಮರುಪಾವತಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೇಸತ್ತು ರವಿವಾರ ಬೆಳಿಗ್ಗೆ ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.







