ಬಾಂಬ್ ನಾಗನ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಎ.27ಕ್ಕೆ ಮುಂದೂಡಿಕೆ

ಬೆಂಗಳೂರು, ಎ.24: ಮಾಜಿ ರೌಡಿಶೀಟರ್ ನಾಗರಾಜ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ 21ನೆ ಸೆಷನ್ಸ್ ಕೋರ್ಟ್ ಎ. 27ಕ್ಕೆ ಮುಂದೂಡಿದೆ.
ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಬನ್ನಿಕಟ್ಟಿ ಹನುಮಂತಪ್ಪ ವಿಚಾರಣೆಯನ್ನು ಮುಂದೂಡಿದರು. ಈ ಸಂದರ್ಭದಲ್ಲಿ ನಾಗನಿಗೆ ಜಾಮೀನು ನೀಡದಂತೆ ಹೆಣ್ಣೂರು ಪೊಲೀಸರು ಆಕ್ಷೇಪಣೆಯನ್ನು ಸಲ್ಲಿಸಿದರು. ನಾಗನ ಮೇಲೆ 44 ಕೇಸುಗಳಿವೆ. ನಮ್ಮ ಮನೆಯಲ್ಲಿ ಹಣ ಇದೆ ಅಂತ ಹೇಳಿ ನಾಗ ಸಿಡಿ ಬಿಡುಗಡೆ ಮಾಡಿದ್ದಾನೆ. ಮನೆಯಲ್ಲಿ ಸಿಕ್ಕ ಹಣ ಗಣ್ಯ ವ್ಯಕ್ತಿಗಳಿಗೆ ಸೇರಿದ್ದು ಎಂದು ಆತನೇ ಹೇಳಿಕೆ ನೀಡಿದ್ದಾನೆ. ಪ್ರಕರಣ ಗಂಭೀರವಾದುದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ಅನಿವಾರ್ಯ. ಈ ಹಂತದಲ್ಲಿ ಜಾಮೀನು ಕೊಟ್ಟರೆ ಸಾಕ್ಷ್ಯಾಧಾರ ನಾಶ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಬಾರದು ಎಂದು ಸರಕಾರಿ ವಕೀಲ ಕೆಂಬಾವಿ ವಾದ ಮಂಡಿಸಿದರು.
ಈ ವೇಳೆ ಪ್ರತಿವಾದ ಮಂಡಿಸಿದ ನಾಗನ ಪರ ವಕೀಲ ಶ್ರೀರಾಮ ರೆಡ್ಡಿ ನಾಗನ ಮನೆಯಲ್ಲಿ ಪತ್ತೆಯಾದ ಹಣದ ಬಗ್ಗೆ ಕ್ರಮ ಕೈಗೊಳ್ಳುವುದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಂಬಂಧಿಸಿದ್ದು. ಪೊಲೀಸರು ಕ್ರಮ ಜರುಗಿಸುವ ಪ್ರಮೇಯ ಇಲ್ಲ ಎಂದು ಪ್ರತಿವಾದ ಮಂಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶ ಬನ್ನಿಕಟ್ಟಿ ಹನುಮಂತಪ್ಪವಿಚಾರಣೆಯನ್ನು ಎ.27ಕ್ಕೆ ಮುಂದೂಡಿದರು.





