ಅಂಗನವಾಡಿಗಳು ಬಾಲಸ್ನೇಹಿಯಾಗಿರಬೇಕು: ಅಹ್ಮದ್ ಹಾಜಿ

ಬಂಟ್ವಾಳ, ಎ. 24: ಮಗುವಿನ ಭವಿಷ್ಯ ನಿರ್ಮಾಣದ ಮೊದಲನೆಯ ಹಂತವಾದ ಅಂಗನವಾಡಿಗಳು ಸಕಲ ವ್ಯವಸ್ಥೆಗಳೊಂದಿಗೆ ಬಾಲಸ್ನೇಹಿಯಾಗುವುದು ಅತ್ಯಗತ್ಯವಾಗಿದೆ ಎಂದು ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಇದರ ವತಿಯಿಂದ ತುಂಬೆ ಸರಕಾರಿ ಶಾಲೆ ಬಳಿ ಊರಿನ ದಾನಿಗಳ ಸಹಾಯದಿಂದ ನವೀಕೃತಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ ಮಗುವಿನ ಮೊದಲ ಶಿಕ್ಷಕಿಯಾದರೆ ಅಂಗನವಾಡಿ ಮಗುವಿನ ಭವಿಷ್ಯ ನಿರ್ಮಾಣದ ಮೊದಲ ಮೆಟ್ಟಿಲಾಗಿದೆ. ಆದ್ದರಿಂದ ಅಂಗನವಾಡಿ ಕಟ್ಟಡಗಳು ಸಕಲ ವ್ಯವಸ್ಥೆಗಳನ್ನು ಹೊಂದಿ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ ಮಾತನಾಡಿ, ಒಂದು ಲಕ್ಷ ರೂ. ಅನುದಾನ ಸಹಿತ ಊರಿನ ದಾನಿಗಳ ಸಹಾಯ ಸಹಕಾರದೊಂದಿಗೆ ಈ ಅಂಗನವಾಡಿ ಕೇಂದ್ರ ಸುಂದರವಾಗಿ ಮೂಡಿ ಬಂದಿದೆ. ತುಂಬೆ ಗ್ರಾಮದಲ್ಲಿರುವ ಒಟ್ಟು ಆರು ಅಂಗನವಾಡಿಗಳನ್ನೂ ನವೀಕರಿಸುವ ಕನಸನ್ನು ಹೊಂದಲಾಗಿದ್ದು ಆ ಪೈಕಿ ಈಗಾಗಲೇ ಮೂರು ಅಂಗನವಾಡಿಗಳನ್ನು ನವೀಕರಿಸಿ ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಗನವಾಡಿಯ ನವೀಕರಣಕ್ಕೆ ವಿವಿಧ ರೀತಿಯಲ್ಲಿ ಸಹಾಯ, ಸಹಕಾರ ನೀಡಿದ ದಾನಿಗಳಿಗೆ ಹಾಗೂ ಸ್ಥಳವಕಾಶ ಹಾಗೂ ಅಂಗನವಾಡಿ ಕಟ್ಟಡ ಒದಗಿಸಿಕೊಟ್ಟ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಜಿಪಂ ಸದಸ್ಯ ರವೀಂದ್ರ ಕಂಬಳಿ, ಗ್ರಾಮ ಪಂಚಾಯತ್ ಅಧ್ಯಕ್ಷತೆ ಹೇಮಾವತಿ, ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು, ಸದಸ್ಯ ಪ್ರಕಾಶ್ ಆಚಾರ್ಯ, ಮಾಜಿ ಸದಸ್ಯ ಮೋನಪ್ಪ ಮಜಿ ಮಾತನಾಡಿದರು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕಿರಣ್ ಶೆಟ್ಟಿ, ತಾಪಂ ಸದಸ್ಯ ಗಣೇಶ್ ಸುವರ್ಣ, ಗ್ರಾಪಂ ಸದಸ್ಯರಾದ ಝಹೂರ್ ಅಹ್ಮದ್, ಸಂಜೀವ ಪೂಜಾರಿ, ಶೋಭಾಲತಾ, ಹರಿಣಾಕ್ಷಿ, ನೇತ್ರಾ, ಆತಿಕಾ ಬಾನು, ಮಾಜಿ ಸದಸ್ಯರಾದ ಅಝೀರ್ ತುಂಬೆ, ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಸಂದ್ಯಾ ಕಾರ್ಯಕ್ರಮ ನಿರೂಪಿಸಿದರು.







