ಮತಲಂಚ: ಚಾರ್ಜ್‌ಶೀಟ್ ಆದ ಸಂಸದ, ಶಾಸಕರ ಅನರ್ಹತೆಗೆ ಆಯೋಗ ಪಟ್ಟು
ಹೊಸದಿಲ್ಲಿ, ಎ.24: ಮತ ಲಂಚ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರುವ ಸಂಸದರು ಹಾಗೂ ಶಾಸಕರನ್ನು ಅನರ್ಹಗೊಳಿಸುವಂತೆ ಭಾರತದ ಚುನಾವಣಾ ಆಯೋಗ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 171ಬಿ ಹಾಗೂ 171ಸಿ ಅನ್ವಯ ಮತಕ್ಕಾಗಿ ಲಂಚ ನೀಡಿರುವುದು ಅಪರಾಧ. ಆದ್ದರಿಂದ ತಕ್ಷಣ ಇವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದೆ.
ಈ ಸಂಬಂಧ ಆಯೋಗ ಜನವರಿ 2ರಂದು ಕಾನೂನು ಹಾಗೂ ನ್ಯಾಯ ಸಚಿವಾಲಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಈ ಸಂಬಂಧ ಪ್ರಜಾಪ್ರತಿನಿಧಿ ಕಾಯ್ದೆ- 1951ರ ಸೆಕ್ಷನ್ 8ಕ್ಕೆ ತಿದ್ದುಪಡಿ ತರುವಂತೆಯೂ ಆಯೋಗ ಒತ್ತಾಯಿಸಿದೆ. ತಿದ್ದುಪಡಿ ಅನ್ವಯ, ಆರೋಪಪಟ್ಟಿ ಸಲ್ಲಿಕೆಯಾದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಲು ಅವಕಾಶ ಇರಬೇಕು ಎಂದು ವಾದಿಸಿದೆ.
ಹಾಲಿ ಸೆಕ್ಷನ್ 8ರ ಅನ್ವಯ, ಮತ ಲಂಚ ಸಾಬೀತಾಗಿ ಶಿಕ್ಷೆಗೊಳಗಾದಲ್ಲಿ ಮಾತ್ರ ಅಂಥ ಜನಪ್ರತಿನಿಧಿಗಳನ್ನು ಕಿತ್ತುಹಾಕಲು ಮತ್ತು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಬಹುದಾಗಿದೆ. ಆದರೆ ಈ ಸೆಕ್ಷನ್‌ನಲ್ಲಿ ಒಳಗೊಂಡಿರುವ ಕಾನೂನು ಅಂಶಗಳು ಮತ ಲಂಚ ನಿರ್ಬಂಧಿಸಲು ಸಾಕಾಗುತ್ತಿಲ್ಲ ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ. ರಾಜಕೀಯದ ಅಪರಾಧೀಕರಣದಿಂದಾಗಿ ಮತ ಲಂಚ ಪ್ರಕರಣಗಳ ವಿಚಾರಣೆಯೂ ವಿಳಂಬವಾಗುತ್ತಿದ್ದು, ಇದನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳುವಂತೆಯೂ ಆಯೋಗ ಸಲಹೆ ಮಾಡಿದೆ.





