ಮಗುವಿನ ಅಳು ನಿದ್ದೆಗೆಡಿಸುತ್ತಿದೆಯೆಂದು ಸ್ವಂತ ಮಗುವನ್ನೇ ಕತ್ತು ಹಿಸುಕಿ ಕೊಂದ ದುಷ್ಟ ತಂದೆ

ಪಾಟ್ನಾ,ಎ.25 : ತನ್ನ ಎರಡು ವರ್ಷದ ಮಗುವಿನ ಅಳುವಿನಿಂದ ನಿದ್ದೆಗೆಟ್ಟ ತಂದೆಯೊಬ್ಬ ಮಗುವಿನ ಕತ್ತು ಹಿಸುಕಿ ಸಾಯಿಸಿ ದೇಹವನ್ನು ಹತ್ತಿರದಲ್ಲಿಯೇ ಹರಿಯುವ ತೊರೆಯೊಂದಕ್ಕೆ ಎಸೆದ ಘಟನೆ ಪಾಟ್ನಾದಿಂದ 350 ಕಿಮೀ ದೂರವಿರುವ ಪುರ್ನಿಯಾ ಜಿಲ್ಲೆಯ ಬೆಲವದನ್ ಗ್ರಾಮದಿಂದ ವರದಿಯಾಗಿದೆ.
ಆರೋಪಿ 35 ವರ್ಷದ ಮಂಗಲ್ ಶರ್ಮ ಎಂಬವನನ್ನು ಪೊಲೀಸರು ಆತನ ಪತ್ನಿ ಸುಲೇಖಾ ದೇವಿಯ ದೂರಿನ ಆಧಾರದಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ. ಶರ್ಮ ಕೂಲಿ ಕಾರ್ಮಿಕನಾಗಿದ್ದು ದಂಪತಿಗೆ ಮೂವರು ಮಕ್ಕಳಿದ್ದಾರೆ. ಕೊಲೆಗೈಯ್ಯಲ್ಪಟ್ಟ ಎರಡು ವರ್ಷದ ಆದರ್ಶ್ ಕುಮಾರ್ ಅವರ ಕಿರಿಯ ಪುತ್ರನಾಗಿದ್ದ.
ರವಿವಾರ ರಾತ್ರಿ ಘಟನೆ ನಡೆದಿದ್ದು ಮಗು ರಾತ್ರಿಯಿಡೀ ಅಳುತ್ತಿತ್ತೆನ್ನಲಾಗಿದೆ. ರಾತ್ರಿ ಎಚ್ಚರಗೊಂಡ ಸುಲೇಖಾ ಪಕ್ಕದಲ್ಲಿ ಮಗು ಆದರ್ಶ್ ಇಲ್ಲದೇ ಇರುವುದನ್ನು ಕಂಡು ಪತಿಯಲ್ಲಿ ವಿಚಾರಿಸಿದಾಗ ಆತ ಅಳುತ್ತಿದ್ದಾನೆಂದಷ್ಟೇ ಹೇಳಿದ್ದ.
ಆದರೆ ಸಂಶಯಗೊಂಡ ಸುಲೇಖಾ ಕೂಡಲೇ ಮನೆಯ ಹೊರಗೆ ಧಾವಿಸಿ ಬಂದಿದ್ದು ತೊರೆ ಸಮೀಪ ಮಗುವಿನ ಮೃತದೇಹ ಪತ್ತೆಯಾಗಿತ್ತು.
ತನ್ನ ಪತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಕಳೆದೆರಡು ತಿಂಗಳುಗಳಿಂದ ಆತ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದನೆಂದೂ ಆಕೆ ಹೇಳಿದ್ದಾಳೆ. ಆದರೆ ಇದನ್ನು ಸಾಬೀತುಪಡಿಸಲು ಆಕೆಯ ಬಳಿ ಯಾವುದೇ ವೈದ್ಯಕೀಯ ದಾಖಲೆಗಳಿಲ್ಲ.
ಪತಿ ಜೈಲಿನಲ್ಲಿರುವುದರಿಂದ ಸುಲೇಖಾಳ ಬಡ ಕುಟುಂಬ ವಸ್ತುಶಃ ಕಂಗಾಲಾಗಿದ್ದು ತುತ್ತು ಊಟಕ್ಕೂ ಗತಿಯಿಲ್ಲದಂತಾಗಿದೆ. ಆದರೆ ಈ ಎಲ್ಲಾ ಕಷ್ಟಗಳನ್ನೂ ಮರೆತು ಆಕೆ ತನ್ನ ಮಗುವಿನ ಸಾವಿಗೆ ನ್ಯಾಯ ಆಗ್ರಹಿಸುತ್ತಿದ್ದಾಳೆ.