‘ಮಂಗಳೂರು ಚಲೋ’ ಕಾರ್ಯಕ್ರಮದ ಬಗ್ಗೆ ಗೊಂದಲ
ಅಹ್ಮದ್ ಖುರೇಷಿ ಮೇಲೆ ದೌರ್ಜನ್ಯ ಪ್ರಕರಣ

ಮಂಗಳೂರು, ಎ.25: ಅಹ್ಮದ್ ಖುರೇಷಿ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಮತ್ತು ನ್ಯಾಯಕ್ಕೆ ಆಗ್ರಹಿಸಿ ‘ಯುನೈಟೆಡ್ ಮುಸ್ಲಿಂ ಫ್ರಂಟ್’ ಸಂಘಟನೆಯು ಜಸ್ಟೀಸ್ ಫಾರ್ ಖುರೇಷಿ’ ಹೆಸರಿನಲ್ಲಿ ಮೇ 2ರಂದು ನಡೆಸಲು ಉದ್ದೇಶಿಸಿದ್ದ ‘ಮಂಗಳೂರು ಚಲೋ’ ಕಾರ್ಯಕ್ರಮದ ಬಗ್ಗೆ ಇದೀಗ ಗೊಂದಲ ಸೃಷ್ಟಿಯಾಗಿದೆ.
ಎ.17ರಂದು ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ ‘ಮಂಗಳೂರು ಚಲೋ’ ನಡೆಸಲು ತೀರ್ಮಾನಿಸಿದ್ದರಲ್ಲದೆ, ಎ.18ರಂದು ಯುನೈಟೆಡ್ ಮುಸ್ಲಿಂ ಫ್ರಂಟ್‌ನ ಸಂಚಾಲಕ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್, ಸಹ ಸಂಚಾಲಕ ಮುಸ್ತಫಾ ಕೆಂಪಿ ಮತ್ತಿತರರು ಸುದ್ದಿಗೋಷ್ಠಿ ನಡೆಸಿ ಮೇ 2ರಂದು ಮಂಗಳೂರು ಚಲೋ ನಡೆಸುವುದಾಗಿ ಪ್ರಕಟಿಸಿದ್ದರು.
ಈ ಮಧ್ಯೆ ಮಂಗಳವಾರ ನಗರದ ಖಾಸಗಿ ನಿವಾಸವೊಂದರಲ್ಲಿ ಯುನೈಟೆಡ್ ಮುಸ್ಲಿಂ ಫ್ರಂಟ್‌ನ ಸದಸ್ಯರ ಸಭೆ ಜರಗಿದ್ದು, ‘ಮಂಗಳೂರು ಚಲೋ’ ಕಾರ್ಯಕ್ರಮ ನಡೆಸುವ ಬಗ್ಗೆ ಈ ಸಭೆಯಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಆ ಮೂಲಕ "ಮಂಗಳೂರು ಚಲೋ" ಕಾರ್ಯಕ್ರಮದ ಬಗ್ಗೆ ಗೊಂದಲ ಉಂಟಾಗಿದೆ.
‘ಅಹ್ಮದ್ ಖುರೇಷಿ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿ ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಮೇ 2ರಂದು "ಮಂಗಳೂರು ಚಲೋ" ನಡೆಸಲಾಗುವುದು’ ಎಂದು ಸಂಚಾಲಕ ಕೆ. ಅಶ್ರಫ್ ಹೇಳಿದ್ದಾರೆ.
ಶಾಸಕ, ಮಾಜಿ ಸಚಿವ ಝಮೀರ್ ಅಹ್ಮದ್‌ರ ಸಹಕಾರ ಮತ್ತು ನಮ್ಮ ಹೋರಾಟದ ಫಲವಾಗಿ ಸರಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಈಗಾಗಲೆ ಸಿಐಡಿ ತನಿಖೆ ಆರಂಭಗೊಂಡಿದೆ. ಮೇ 5ರೊಳಗೆ ಸಿಐಡಿ ತನ್ನ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ. ಆ ವರದಿ ನೋಡಿದ ಬಳಿಕ ‘ಮಂಗಳೂರು ಚಲೋ’ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹ ಸಂಚಾಲಕ ಮುಸ್ತಫಾ ಕೆಂಪಿ ತಿಳಿಸಿದ್ದಾರೆ.







