ಮಂಗಳೂರಿನಲ್ಲಿ ಮಲೇರಿಯಾ ಇಳಿಮುಖ: ಮೇಯರ್

ಮಂಗಳೂರು, ಎ.25: ಕಳೆದ ವರ್ಷಕ್ಕೆ ಹೋಲಿಸಿದಾಗ ಮಂಗಳೂರು ನಗರದಲ್ಲಿ ಮಲೇರಿಯಾ ಪ್ರಕರಣಗಳು ಬಹಳಷ್ಟು ಕಡಿಮೆಯಾಗಿವೆ. ಮುನ್ನೆಚ್ಚರಿಕಾ ಕ್ರಮದ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಮನಪಾ ಮಲೇರಿಯಾ ನಿಯಂತ್ರಣ ಘಟಕದ ಸಿಬ್ಬಂದಿ ನಗರ ವ್ಯಾಪ್ತಿಯ ಎಲ್ಲಾ ವಾರ್ಡ್‌ನ ಗುರುತಿಸಲಾದ ಬಾವಿಗಳಿಗೆ ಗಪ್ಪಿ ಮೀನು ಬಿಡಲು ಸೂಚನೆ ನೀಡಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ದ.ಕ. ಜಿಲ್ಲಾಡಳಿತ, ಮಂಗಳೂರು ಪಾಲಿಕೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಪಾಲಿಕೆಯ ಸಭಾಂಗಣದಲ್ಲಿ ಆಯೋಜಿಸಲಾದ ‘ವಿಶ್ವ ಮಲೇರಿಯಾ ದಿನಾಚರಣೆ-2017’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವರ್ಷದ ಜನವರಿಯಲ್ಲಿ ಒಟ್ಟು 403 ಮಲೇರಿಯಾ ಪ್ರಕರಣಗಳು ಕಂಡು ಬಂದಿದ್ದು (ಕಳೆದ ವರ್ಷ ಜನವರಿಯಲ್ಲಿ 1,068 ಪ್ರಕರಣಗಳು), ಫೆಬ್ರವರಿಯಲ್ಲಿ 305 (ಕಳೆದ ವರ್ಷ 662), ಮಾರ್ಚ್‌ನಲ್ಲಿ 305 (ಕಳೆದ ವರ್ಷ 400) ಹಾಗೂ ಎಪ್ರಿಲ್ 23ರವರೆಗೆ 258 ಪ್ರಕರಣಗಳು (ಕಳೆದ ವರ್ಷ 475) ವರದಿಯಾಗಿದೆ. ಪ್ರತೀ ತಿಂಗಳಿನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಮಲೇರಿಯಾ ಇಳಿಕೆ ಪ್ರಮಾಣ ಕಂಡುಬರುತ್ತಿದೆ ಎಂದರು.
ಮಲೇರಿಯಾ ಹರಡುವ ಅನಾಫಿಲೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ಪೈಕಿ ಬಾವಿಗಳು ಒಂದಾಗಿದ್ದು, ನಗರ ವ್ಯಾಪ್ತಿಯಲ್ಲಿರುವ ಬಾವಿಗಳ ನಿಖರ ಮಾಹಿತಿಯನ್ನು ಈಗಾಗಲೇ ದಾಖಲಿಸಲಾಗಿದೆ. ಗುರುತಿಸಲಾದ ಬಾವಿಗಳಲ್ಲಿ ಸೊಳ್ಳೆ ಮರಿಗಳು ಉತ್ಪತ್ತಿಯನ್ನು ತಡೆಯಲು ಜೈವಿಕ ವಿಧಾನದ ಮೂಲಕ ಮಲೇರಿಯಾ ತಡೆಯಲು ಗಪ್ಪಿ ಮೀನುಗಳನ್ನು ಬಿಡುವ ಕಾರ್ಯ ನಡೆಯಲಿದೆ ಎಂದರು.
ನೀರಿನ ಟ್ಯಾಂಕ್ ಸ್ವಚ್ಚಗೊಳಿಸಲು ಮನವಿ: ಮಂಗಳೂರು ವ್ಯಾಪ್ತಿಯ ಎಲ್ಲಾ ಕಟ್ಟಡಗಳ ಆವರಣದಲ್ಲಿರುವ ನೀರಿನ ಮೂಲವನ್ನು (ನೀರಿನ ಟ್ಯಾಂಕ್)ಮುಂದಿನ 15-20 ದಿನದೊಳಗೆ ಬರಿದು ಮಾಡಿ, ಸ್ವಚ್ಚಗೊಳಿಸಬೇಕು. ಜತೆಗೆ ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಕಟ್ಟಡದ ಆವರಣ ಹಾಗೂ ಮೇಲ್ಛಾವಣಿಗಳನ್ನು ಸ್ವಚ್ಚಗೊಳಿಸುವ ಮೂಲಕ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು ಎಂದು ಮೇಯರ್ ಸಾರ್ವಜನಿಕರಿಗೆ ಮನವಿ ಮಾಡಿದರು.
ಪೈಲೇರಿಯಾದ ಆತಂಕ: ಶಾಸಕ ಜೆ.ಆರ್.ಲೋಬೋ ಮಾತನಾಡಿ, ಮಂಗಳೂರಿನಲ್ಲಿ ಮಲೇರಿಯಾ ಹಂತ ಹಂತವಾಗಿ ಹತೋಟಿಗೆ ಬರುತ್ತಿದೆ. ಆದರೂ ನಾವು ಎಚ್ಚರಿಕೆ ವಹಿಸಬೇಕಿದೆ. ಒಳಚರಂಡಿ ನೀರು ತೆರೆದ ಚರಂಡಿಯಲ್ಲಿ ಹೋಗುವುದನ್ನು ಮೊದಲು ತಡೆಗಟ್ಟಬೇಕು. ತೋಡಲ್ಲಿ ಸ್ವಚ್ಛವಾದ ನೀರು ಹೋಗುವಂತೆ ಮಾತ್ರ ಅವಕಾಶ ನೀಡಬೇಕು. ಇದು ಸಾಧ್ಯವಾಗದಿದ್ದರೆ ಮಂಗಳೂರಿಗೆ ಪೈಲೇರಿಯಾ ಮತ್ತೆ ಬರುವ ಸಾಧ್ಯತೆಯೂ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಉಪಮೇಯರ್ ರಜನೀಶ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ, ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು. ಡಾ. ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧು ಕಾರ್ಯಕ್ರಮ ನಿರೂಪಿಸಿದರು.
ಕಾರ್ಮಿಕರ ಪರೀಕ್ಷೆಗೆ ಶುಭೋದಯ ತಂಡ!
ದಿನನಿತ್ಯ ಕೆಲಸಗಳಿಗೆ ತೆರಳುವ ಕಾರ್ಮಿಕರನ್ನು ಭೇಟಿ ಅಥವಾ ತಪಾಸಣೆಗೆಂದು ಸರಿಯಾದ ಸಮಯಕ್ಕೆ ಸಿಗದ ಕಾರಣ ಕಾರ್ಮಿಕರ ಪರೀಕ್ಷಿಸಲು ‘ಪಾಲಿಕೆಯಿಂದ ‘ಗುಡ್ ಮಾರ್ನಿಂಗ್ ಟೀಮ್-ಶುಭೋದಯ ತಂಡ’ ರಚಿಸಲಾಗಿದೆ. ಈ ತಂಡವು ದಿನನಿತ್ಯ ಕಾರ್ಮಿಕರು ಕೆಲಸಕ್ಕೆ ತೆರಳುವ ಮೊದಲು ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.
ಮಲೇರಿಯಾ: ಮನೆ ಬಾಗಿಲಲ್ಲೇ ಚಿಕಿತ್ಸೆ ಲಭ್ಯ
ಸಮಗ್ರ ಮಲೇರಿಯಾ ನಿಯಂತ್ರಣದ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹೊಸ ಹೆಜ್ಜೆ ಕೈಗೊಂಡಿದೆ. ನಿಮ್ಮ ಮನೆಯ ಬಾಗಿಲಲ್ಲಿ ಮಲೇರಿಯಾ ರೋಗ ಪತ್ತೆ ಹಾಗೂ ಚಿಕಿತ್ಸೆಗಾಗಿ 9448556872 ಸಂಖ್ಯೆಗೆ ಕರೆ ಮಾಡಿ, ಉಚಿತ ಸೇವೆಯನ್ನು ಪಡೆಯಬಹುದು. ಇದು ಮಂಗಳೂರು ನಗರ ವ್ಯಾಪ್ತಿಗೆ ಮಾತ್ರ ಸೀಮಿತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಕಚೇರಿ ದ.ಕ. ಇದರ ಆಶ್ರಯದಲ್ಲಿ ಮನೆ ಬಾಗಿಲಿಗೆ ಸೇವೆ ನಡೆಯಲಿದೆ.







