ನಗರದಲ್ಲಿ ‘ಒನ್ ವೇ’ ಸಂಚಾರ ವ್ಯವಸ್ಥೆ ಅಗತ್ಯ: ಶಾಸಕ ಲೋಬೋ

ಮಂಗಳೂರು, ಎ.25: ನಗರದಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಪ್ರಮುಖ ಜಂಕ್ಷನ್‌ಗಳಲ್ಲಿ ‘ಒನ್ ವೇ’ (ಏಕಪಥ) ಸಂಚಾರ ವ್ಯವಸ್ಥೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕಾಗಿದೆ. ಜನಪ್ರತಿನಿಧಿಗಳು ಈ ಬಗ್ಗೆ ರಾಜಕೀಯ ಒತ್ತಡ ಬೀರದೆ ಸಂಚಾರಿ ಪೊಲೀಸರ ಕ್ರಮಕ್ಕೆ ಸಹಕಾರ ನೀಡಬೇಕಾಗಿದೆ ಎಂದು ಶಾಸಕ ಜೆ.ಆರ್. ಲೋಬೊ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದು ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ನಗರದ ಸಂಚಾರ ವ್ಯವಸ್ಥೆ ಸುಧಾರಣೆ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆಯೂ ನಗರದ ಕೆಲವು ಕಡೆಗಳಲ್ಲಿ ಏಕ ಪಥ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಒತ್ತಡದಿಂದಾಗಿ ಆ ವ್ಯವಸ್ಥೆಯನ್ನು ಹಿಂಪಡೆಯಲಾಯಿತು. ಬೆಂಗಳೂರಿನಲ್ಲಿ ಸುಮಾರು ಐದಾರು ಕಿ.ಮೀ.ವರೆಗೆ ಏಕಪಥ ಸಂಚಾರ ವ್ಯವಸ್ಥೆಯಿದ್ದು, ಅತ್ಯಂತ ಸುವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ವಾಹನ ದಟ್ಟಣೆ ಹೆಚ್ಚುತ್ತಿರುವ ಮಂಗಳೂರು ನಗರದಲ್ಲಿಯೂ ಇಂತಹ ವ್ಯವಸ್ಥೆ ಅತೀ ಅಗತ್ಯವಾಗಿದೆ ಎಂದು ಹೇಳಿದರು.
ನಗರದ ಕೆಲವು ಪ್ರಮುಖ ಚತುಷ್ಪಥ ರಸ್ತೆಗಳ ಜಂಕ್ಷನ್‌ಗಳಲ್ಲಿ ಅಲ್ಲಲ್ಲಿ ರಸ್ತೆ ವಿಭಾಜಕಗಳನ್ನು ತೆರೆದಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಯೆಯ್ಯಾಡಿ ರಸ್ತೆಯಲ್ಲಿಯೂ ಅಲ್ಲಲ್ಲಿ ರಸ್ತೆ ವಿಭಾಜಕಗಳಲ್ಲಿ ವಾಹನಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ. ಕೆಲವೊಂದು ಕಡೆ ರಸ್ತೆ ಬದಿಗಳಲ್ಲೇ ರಾತ್ರಿ ಹೊತ್ತು ತಂಗುವ ಖಾಸಗಿ ಬಸ್ಸುಗಳು ಅಲ್ಲೇ ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನೂ ನಡೆಸಲಾಗುತ್ತಿದೆ. ಇಂತಹ ಅನಧಿಕೃತ ಪಾರ್ಕಿಂಗ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಸಬೇಕು ಎಂದು ಶಾಸಕ ಲೋಬೋ ಸಲಹೆ ನೀಡಿದರು.
ಸ್ಥಳವಿರುವಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಲಹೆ: ನಗರದಲ್ಲಿ ಅನಧಿಕೃತ ಸ್ಥಳಗಳಲ್ಲಿ, ಫುಟ್‌ಪಾತ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ, ನಗರದಲ್ಲಿ ಲಭ್ಯವಿರುವ ಸಣ್ಣಪುಟ್ಟ ಸ್ಥಳಗಳನ್ನು ಗುರುತಿಸಿ ಅಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿದಾಗ ಸಂಚಾರ ವ್ಯವಸ್ಥೆ ಸುಗಮಗೊಳ್ಳಲಿದೆ. ನಂತೂರಿನಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಿದ್ದಾರೆ ಎಂದು ಜೆ.ಆರ್. ಲೋಬೋ ಹೇಳಿದರು.
ಸೂಚನಾ ಫಲಕ, ಝೀಬ್ರಾ ಕ್ರಾಸಿಂಗ್ ಪೇಂಯ್ಟಿಂಗ್‌ಗೆ ಆಗ್ರಹ: ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯಿಂದಾಗಿ ಪಾದಚಾರಿಗಳಿಗೆ ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಸೂಚನಾ ಫಲಕ ಹಾಗೂ ಝೀಬ್ರಾ ಕ್ರಾಸಿಂಗ್‌ಗೆ ಪೇಂಯ್ಟಿಂಗ್ ಹಾಕುವ ಕ್ರಮವನ್ನು ಮನಪಾ ನಿರ್ವಹಿಸಬೇಕು. ಜತೆಗೆ ಅನಧಿಕೃತ ಪಾರ್ಕಿಂಗ್ ಸ್ಥಳದಲ್ಲಿನ ವಾಹನಗಳನ್ನು ತೆರವುಗೊಳಿಸಲು ಅಗತ್ಯವಾದ ಯಂತ್ರವನ್ನು (ಟೋಯಿಂಗ್ ಮೆಶಿನ್) ಮನಪಾದಿಂದ ಸಂಚಾರಿ ಪೊಲೀಸ್ ವಿಭಾಗಕ್ಕೆ ಕಲ್ಪಿಸಬೇಕು ಎಂದು ಸಂಚಾರಿ ವಿಭಾಗದ ಡಿಸಿಪಿ ಡಾ. ಸಂಜೀವ ಪಾಟೀಲ್ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್, ಈಗಾಗಲೇ ನಗರದಲ್ಲಿ ಝೀಬ್ರಾ ಕ್ರಾಸಿಂಗ್‌ಗೆ ಪೇಂಯ್ಟಿಂಗ್ ಹಾಗೂ ಸೂಚನಾ ಫಲಕ ಅಳವಡಿಸುವ ಕಾಮಗಾರಿ ಆರಂಭಗೊಂಡಿದೆ ಎಂದರು.
ಅನಧಿಕೃತ ಗೂಡಂಗಡಿ, ಫ್ಲೆಕ್ಸ್‌ಗಳ ತೆರವು: ನಗರದಲ್ಲಿ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದಕ್ಕೆ ಪೊಲೀಸರ ಸಹಕಾರ ಅಗತ್ಯ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ಸ್ಟೇಟ್‌ಬ್ಯಾಂಕ್, ಕಾವೂರು ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ವ್ಯಾಪಾರ ನಿಷೇಧದ ಫಲಕಗಳನ್ನು ಅಳವಡಿಸಲಾಗುವುದು. ಮಸಾಜ್ ಪಾರ್ಲರ್‌ಗಳು, ಸ್ಕಿಲ್ ಗೇಮ್‌ಗಳಿಗೆ ಮನಪಾದಿಂದ ಪರವಾನಿಗೆ ನಿಷೇಧಿಸಲಾಗಿದೆ. ಹಾಗಾಗಿ ನಗರದಲ್ಲಿರುವ ಎಲ್ಲಾ ಇಂತಹ ವ್ಯವಸ್ಥೆಗಳ ವಿರುದ್ಧ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮೇಯರ್ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಸಂಜೀವ ಪಾಟೀಲ್, ನಗರದಲ್ಲಿನ ಅನಧಿಕೃತ ಗೂಡಂಗಡಿಗಳ ತೆರವಿಗೆ ಎಸಿಪಿ (ಸಂಚಾರಿ) ತಿಲಕ್ ಚಂದ್ರ ಅವರು ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಸಾಜ್ ಪಾರ್ಲರ್ ಹಾಗೂ ಸ್ಕಿಲ್ ಗೇಮ್ ವ್ಯವಸ್ಥೆಗಳನ್ನು ಬಂದ್ ಮಾಡಲು ಸ್ಥಳೀಯ ಪೊಲೀಸ್ ಠಾಣಾ ಸಿಬ್ಬಂದಿ ಮೂಲಕ ಕ್ರಮ ವಹಿಸಲಾಗುವುದು ಎಂದರು.
ಶಾಲಾ- ಕಾಲೇಜುಗಳ ಸಮಯದಲ್ಲಿ ಬದಲಾವಣೆಗೆ ಜಿಲ್ಲಾಡಳಿತಕ್ಕೆ ಮನವಿ
ನಗರದಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ವಾಹನ ದಟ್ಟಣೆಯಿಂದ ಆಗುವ ತೊಂದರೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿನ ಶಾಲೆಗಳು ಆರಂಭ ಮತ್ತು ಕೊನೆಗೊಳಿಸುವ ಸಮಯದಲ್ಲಿ ಅಂತರವನ್ನು ಕಾಪಾಡಿದರೆ ಉತ್ತಮ ಎಂಬ ಅಭಿಪ್ರಾಯವನ್ನು ಮೇಯರ್ ಕವಿತಾ ಸನಿಲ್ ವ್ಯಕ್ತಪಡಿಸಿದರು.
ಜೆ.ಆರ್. ಲೋಬೋ ಪ್ರತಿಕ್ರಿಯಿಸಿ, ಈ ವಿಚಾರ ಜಿಲ್ಲಾಡಳಿತದ ಮಟ್ಟದಲ್ಲಿ ಚರ್ಚೆ ಆಗಿ ಕ್ರಮಕೈಗೊಳ್ಳಬೇಕಾಗಿದೆ. ಈ ಬಗ್ಗೆ ಮನವಿಯನ್ನು ಮನಪಾ ವತಿಯಿಂದ ಸಲ್ಲಿಸೋಣ ಎಂದು ಹೇಳಿದರು.
ಸಭೆಯಲ್ಲಿ ಸದಸ್ಯರಾದ ಮಹಾಬಲ ಮಾರ್ಲ, ಶಶಿಧಹ ಹೆಗ್ಡೆ, ಗಣೇಶ್ ಹೊಸಬೆಟ್ಟು, ದಯಾನಂದ ಶೆಟ್ಟಿ, ನವೀನ್ ಡಿಸೋಜಾ, ಪೂರ್ಣಿಮಾ, ಪುರುಷೋತ್ತಮ ಚಿತ್ರಾಪುರ ಮೊದಲಾದವರು ತಮ್ಮ ವಾರ್ಡ್‌ಗಳಲ್ಲಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ಗಮನ ಸೆಳೆದರು. ಉಪ ಮೇಯರ್ ರಜನೀಶ್, ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.
ಪ್ರತಿ ತಿಂಗಳು ಟ್ರಾಫಿಕ್ ಸಭೆ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಸಲುವಾಗಿ ಪ್ರತಿ ತಿಂಗಳು ಟ್ರಾಫಿಕ್ ಸಭೆಯನ್ನು ನಡೆಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಸಭೆಯಲ್ಲಿ ತಿಳಿಸಿದರು. ನಗರದಲ್ಲಿ ಅಳವಡಿಸಲಾಗಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದ ಅವರು, ಧಾರ್ಮಿಕ ಕಾರ್ಯಕ್ರಮಗಳಿಗೆ ಎರಡು ಮೂರುದಿನಗಳ ಅವಧಿಗೆ ಮನಪಾದಿಂದ ಅನುಮತಿ ಪಡೆದು ಫ್ಲೆಕ್ಸ್ ಹಾಕುವುದನ್ನು ಹೊರತುಪಡಿಸಿ ಯಾವುದೇ ರೀತಿಯ ಖಾಸಗಿ ಫ್ಲೆಕ್ಸ್‌ಗಳ ಅಳವಡಿಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.







