ಮಂಗಳೂರಿನಲ್ಲಿ ಕನ್ಯಾಕುಮಾರಿ ಬೆಲ್ಲ: ಸಿಹಿಯೂ ಇದೆ- ಖಾರವೂ ಇದೆ!

ಮಂಗಳೂರು, ನ. 25: ತಾಳೆಮರದ ನೀರಿನಿಂದ ತಯಾರಿಸುವ "ಓಲೆ ಬೆಲ್ಲ" ಎಂದು ತುಳುನಾಡಿನಲ್ಲಿ ಕರೆಯಲ್ಪಡುವ ಔಷಧಿಯುಕ್ತ ಸಿಹಿ ಬೆಲ್ಲ ಮಂಗಳೂರಿನ ವೆಲೆನ್ಸಿಯಾ ಬೀದಿಯಲ್ಲಿ ಲಭ್ಯ.
ಕನ್ಯಾಕುಮಾರಿಯಿಂದ ತಮಿಳು ಮೂಲದ ಮಾರಾಟಗಾರರು ಈ ಬೆಲ್ಲವನ್ನು ಟನ್‌ಗಟ್ಟಲೆ ತಂದು ರಸ್ತೆ ಬದಿಯಲ್ಲಿ ಮಾರಾಟದಲ್ಲಿ ತೊಡಗಿದ್ದಾರೆ. ಕಟ್ಟೊಂದಕ್ಕೆ (25 ತುಂಡುಗಳು) 500 ರೂ.ಗೆ ಈ ಬೆಲ್ಲವನ್ನು ಮಾರಾಟ ಮಾಡಲಾಗುತ್ತಿದ್ದರೆ, ಬಿಡಿಯಾದ ಐದು ತುಂಡುಗಳಿಗೆ 100 ರೂ. ಬೆಲೆ.
"ಕನ್ಯಾಕುಮಾರಿಯ ನಮ್ಮ ತೋಪುಗಳಲ್ಲಿ ಈ ಬೆಲ್ಲವನ್ನು ಕೈಯಿಂದಲೇ ತಯಾರು ಮಾಡಲಾಗುತ್ತದೆ. ಒಂದೊಮ್ಮೆ ನಗರಕ್ಕೆ ಬರುವಾಗ ಒಂದು ಟನ್‌ನಷ್ಟು ಬೆಲ್ಲವನ್ನು ಹೊತ್ತು ಬರುತ್ತೇವೆ. ಸುಮಾರು 10ರಿಂದ 15 ದಿನದಲ್ಲಿ ಮಾರಾಟ ಮಾಡಿ (ಸುಮಾರು ಐದು ಮಂದಿ ರಸ್ತೆಯ ಉದ್ದಕ್ಕೂ ಅಲ್ಲಲ್ಲಿ) ಹಿಂತಿರುಗುತ್ತೇವೆ. ಮತ್ತೆ ಅಲ್ಲಿಂದ ಪಿಕ್‌ಅಪ್ ವಾಹನದಲ್ಲಿ ಬೆಲ್ಲ ತಂದು ಇಲ್ಲಿ ಮಾರಾಟ ಮಾಡುತ್ತೇವೆ’’ ಎನ್ನುತ್ತಾರೆ ಬೆಲ್ಲದ ವ್ಯಾಪಾರಿ ಪೆರಿಯ ಸಾಮಿ.
‘‘ಮಳೆಗಾಲ ಹಾಗೂ ಚಳಿಗಾಲದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ ಬಿರು ಬೇಸಿಗೆಯಲ್ಲಿ ಗ್ರಾಹಕರ ಸಂಖ್ಯೆ ಸ್ವಲ್ಪ ಕಡಿಮೆ. ಆದರೂ ವ್ಯಾಪಾರವಾಗುತ್ತದೆ’’ ಎಂದು ಅವರು ಹೇಳುತ್ತಾರೆ. ಓಲೆ ಬೆಲ್ಲದ ಜತೆ ಇವರಲ್ಲಿ ಉರುಟಿನ ಉಂಡೆಯಾಕಾರದ ಸಿಹಿ ಬೆಲ್ಲವೂ ಇದೆ. ಜತೆಗೆ ಶುಂಠಿ ಹಾಗೂ ಕಾಳು ಮೆಣಸು ಮಿಶ್ರಿತ ಬೆಲ್ಲವನ್ನೂ ಇವರು ಮಾರುತ್ತಾರೆ.





