ಯುವಕನ ಕತ್ತುಕೊಯ್ದು ಕೊಂದಿದ್ದ ಆರೋಪಿಯ ಬಂಧನ

ಕಾಸರಗೋಡು, ಎ.25: ಮಲಪ್ಪುರಂ ಮಂಜೇರಿ ಬಳಿಯ ಕಾರಾಪರಂಬ್ ನಲ್ಲಿ ನೆಟ್ಟಣಿಗೆಯ ಆಶಿಕ್ (22) ಎಂಬಾತನಿಗೆ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಮಂಜೇರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೊಗ್ರಾಲ್ ಕೊಪ್ಪಳದ ನವಾಝ್ (21) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮಂಜೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೃತ್ಯದ ಬಳಿಕ ಮಂಜೇರಿಯಿಂದ ಪರಾರಿಯಾಗಿದ್ದ ನವಾಝ್ ಕಾಸರಗೋಡು ವಿದ್ಯಾನಗರ ಪೊಲೀಸ್ ಠಾಣೆಗೆ ಶರಣಾಗಿದ್ದನು. ಬಳಿಕ ಆರೋಪಿಯನ್ನು ಮಂಜೇರಿ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಆರೋಪಿಯನ್ನು ಕಾರಾಪರಂಬ್‌ನ ಕ್ವಾರ್ಟರ್ಸ್‌ಗೆ ಕೊಂಡೊಯ್ದ ಮಂಜೇರಿ ಪೊಲೀಸರು ಮಾಹಿತಿ ಸಂಗ್ರಹಿಸಿದರು. ಆಶಿಕ್ ನ ಕೊಲೆಗೆ ಬಳಸಿದ ಕತ್ತಿಯನ್ನು ಕ್ವಾರ್ಟರ್ಸ್‌ನಿಂದ ಪತ್ತೆಹಚ್ಚಲಾಯಿತು.
ಎ.22ರಂದು ರಾತ್ರಿ 9:30ರ ವೇಳೆಗೆ ಕಾರಾಪರಂಬ್‌ನ ಕ್ವಾರ್ಟರ್ಸ್‌ನಲ್ಲಿ ಆಶಿಕ್‌ನನ್ನು ನವಾಝ್ ಕುತ್ತಿಗೆಗೆ ಇರಿದು ಕೊಲೆಗೈದಿದ್ದನು. ಕ್ವಾರ್ಟರ್ಸ್‌ನ ಬಳಿ ವಾಹನ ನಿಲುಗಡೆಗೊಳಿಸುವ ವಿಷಯದಲ್ಲಿ ಇಬ್ಬರ ಮಧ್ಯೆ ಹುಟ್ಟಿಕೊಂಡ ವಿವಾದವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.





