ರಾಜಧಾನಿ ದಿಲ್ಲಿಯಲ್ಲಿ ಮೋದಿ ಅಲೆಯಲ್ಲಿ ಕೊಚ್ಚಿ ಹೋದ ಆಪ್, ಕಾಂಗ್ರೆಸ್
ಹೊಸದಿಲ್ಲಿ, ಎ.26: ರಾಷ್ಟ್ರದ ರಾಜಧಾನಿ ದಿಲ್ಲಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಕೊಚ್ಚಿ ಹೋಗಿದೆ. ಬಹುಮತಕ್ಕೆ 137 ಸ್ಥಾನಗಳನ್ನು ಗೆಲ್ಲಬೇಕಾಗಿದ್ದು, ಆದರೆ ಬಿಜೆಪಿ ಸ್ಪಷ್ಟ ಬಹುಮತ ಗಳಿಸುವತ್ತ ಹೆಜ್ಜೆ ಇರಿಸಿದೆ.
ದಿಲ್ಲಿಯ ಮೂರು ಪಾಲಿಕೆಗಳಲ್ಲೂ ಬಿಜೆಪಿ ಸ್ಪಷ್ಟ ಬಹುಮತ ಗಳಿಸುವುದು ಖಚಿತವಾಗಿದೆ. ಮೂರನೇ ಬಾರಿ ದಿಲ್ಲಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿ ತಯಾರಿ ನಡೆಸಿದೆ. ಆದರೆ "ಇದು ಮೋದಿ ಅಲೆ ಅಲ್ಲ ..ಇಎಂವಿ ಅಲೆ '' ಎಂದು ಆಪ್ ಧುರೀಣರು ಅಭಿಪ್ರಾಯಪಟ್ಟಿದ್ಧಾರೆ.
ಹತ್ತು ವರ್ಷಗಳಿಂದ ದಿಲ್ಲಿಯ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಇನ್ನೂ ಐದು ವರ್ಷಗಳ ಕಾಲ ಆಡಳಿತ ನಡೆಸಲು ಮತದಾರರು ಅಧಿಕಾರ ನೀಡಿದ್ದಾರೆ.
ಕಳೆದ ತಿಂಗಳು ಗೋವಾ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕೈ ಸುಟ್ಟುಕೊಂಡಿದ್ದ ಆಪ್ ಗೆ ಮತ್ತೆ ಮುಖಭಂಗವಾಗಿದೆ. ದಿಲ್ಲಿಯನ್ನು ಕಡೆಗಣಿಸಿ ಇತರ ರಾಜ್ಯಗಳಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದ ಆಪ್ ಗೆ ಮತದಾರರು ಪಾಲಿಕೆ ಚುನಾವಣೆಯಲ್ಲಿ ಎಚ್ಚರಿಕೆ ನೀಡಿದಂತೆ ಕಂಡು ಬಂದಿದೆ.
ಒಟ್ಟು 270 ಸ್ಥಾನಗಳ ಪೈಕಿ ಬಿಜೆಪಿ 185, ಆಪ್ 45, ಕಾಂಗ್ರೆಸ್ 35 ಮತ್ತು 10 ಕ್ಷೇತ್ರಗಳಲ್ಲಿ ಇತರ ಪಕ್ಷಗಳು ಮುನ್ನಡೆ ಸಾಧಿಸಿದೆ.